ವಿರೋಧಿಗಳು ಏನೇ ಹೇಳಿದ್ರೂ ಕೆಎಚ್ಎಂ ಗೆಲವು ನಿಶ್ಚಿತ
ಕೋಲಾರ: ಕಳೆದ 23 ವರ್ಷಗಳ ಅವಧಿಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳೇ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಅವರಿಗೆ ಶ್ರೀರಕ್ಷೆ. ಮತ್ತೆ ಅವರು ಗೆಲ್ಲೋದು ಗ್ಯಾರೆಂಟಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್.ಅನಿಲ್ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಅವರು ಕೆ.ಎಚ್.ಮುನಿಯಪ್ಪ ಒಳಗೊಂಡಂತೆ ಯುಪಿಎ ಹಾಗೂ ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರದ ಸಾಧನೆಗಳ ಮಾಹಿತಿಯನ್ನು ಆಧರಿಸಿದ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು.
'ವಿರೋಧಿಗಳು ಏನೇ ಅಪಪ್ರಚಾರ ಮಾಡಿದರೂ ಕ್ಷೇತ್ರದ ಮತದಾರರು ನಂಬಲು ಸಿದ್ಧರಿಲ್ಲ. ಆರು ಬಾರಿ ಸಂಸದರಾಗಿ, 10 ವರ್ಷ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಕಿರುಹೊತ್ತಿಗೆಯಲ್ಲಿ ತಿಳಿಸಲಾಗಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು ಇದನ್ನು ಪ್ರತಿ ಮನೆಗೆ ತಲುಪಿಸಿ ಮುನಿಯಪ್ಪ ಪರವಾಗಿ ಮತಯಾಚನೆ ಮಾಡಲಿದ್ದಾರೆ' ಎಂದರು.
ವಿಧಾನಪರಿಷತ್ ಸದಸ್ಯ ನಜೀರ್ ಅಹಮ್ಮದ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರೂ ಆಗಿರುವುದರಿಂದ ಕೋಲಾರ ಕ್ಷೇತ್ರಕ್ಕೆ ಹೆಚ್ಚು ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲ. ಮುನಿಯಪ್ಪ ಮತ್ತು ನಜೀರ್ ಅಹಮ್ಮದ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.
ಚಿಂತಾಮಣಿ ಮಾಜಿ ಶಾಸಕ ಸುಧಾಕರ್ ಅವರು ಮುನಿಯಪ್ಪ ವಿರುದ್ಧ ಮಾಡಿರುವ ಆರೋಪಗಳು ನಿರಾಧಾರ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ಸುಧಾಕರ್ ಅವರಿಗೆ ಟಿಕೆಟ್ ನೀಡಲಿಲ್ಲ. ಹಾಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದ ಮುನಿಯಪ್ಪ ಅವರು ಪಕ್ಷದ ಪರವಾಗಿ ಕೆಲಸ ಮಾಡಬೇಕಾಯಿತು. ಆದರೆ. ಸುಧಾಕರ್ ತಮ್ಮ ಪರವಾಗಿ ಕೆಲಸ ಮಾಡಲಿಲ್ಲವೆಂಬ ಕೋಪಕ್ಕೆ ಸುಳ್ಳು ಹೇಳುತ್ತಿದ್ದಾರೆಂದು ಸ್ಪಷ್ಟನೆ ನೀಡಿದರು.
ಮಾಲೂರು ಮಾಜಿ ಶಾಸಕ ಎ.ನಾಗರಾಜು, ಮುಳಬಾಗಿಲಿನ ಅಂಬರೀಷ್ ಸಹ ಪಕ್ಷದ ಪರವಾಗಿ ಕೆಲಸ ಮಾಡಬೇಕೆಂದು ಮನವಿ ಮಾಡುತ್ತೇವೆ. ಕಾಂಗ್ರೆಸ್ನಲ್ಲಿ ಯಾವುದೇ ಗಂಭೀರವಾದ ಸಮಸ್ಯೆಗಳು ಇಲ್ಲ ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, 'ಸ್ಥಿರ-ಸುಭದ್ರ ಸರ್ಕಾರ ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ. ಮತದಾರರು ತಮ್ಮ ಜವಾಬ್ದಾರಿಯನ್ನು ಅರಿತು ಕಾಂಗ್ರೆಸ್ಗೆ ಮತ ನೀಡಲಿದ್ದಾರೆ' ಎಂದರು.
ಸಾಹಿತಿ ಹಾಗೂ ವಿಧಾನ ಪರಿಷತ್ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಕೋಲಾರ ಬ್ಲಾಕ್ ಕಾಂಗ್ರೆಸಿನ ಅಧ್ಯಕ್ಷ ಪ್ರಸಾದ್ಬಾಬು, ಜಿಲ್ಲಾ ಖಜಾಂಚಿ ರಾಮಪ್ರಸಾದ್, ಮಾಜಿ ಸಚಿವ ನಿಸಾರ್ ಅಹಮ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಳಗಾನಹಳ್ಳಿ ಮುನಿವೆಂಕಟಪ್ಪ ಇದ್ದರು.