ರಾಮನಾಮದಿಂದ ಜನ್ಮ ಸಾರ್ಥಕ: ಟಿ.ಎಲ್.ಆನಂದ್
ಚಿಂತಾಮಣಿ: ಬಾಯಿ ಎಂಬ ಬಾಗಿಲಲ್ಲಿ, ನಾಲಿಗೆ ಎಂಬ ಹೊಸ್ತಿಲ ಮೇಲೆ ರಾಮ ನಾಮವೆಂಬ ಎರಡು ದೀಪಗಳನ್ನಿಟ್ಟರೆ ಬದುಕಿನ ಅಂತರಂಗ ಮತ್ತು ಬಹಿರಂಗದಲ್ಲಿ ನಿರಂತರ ಬೆಳಕನ್ನು ಬೀರುತ್ತದೆ ಮತ್ತು ಜೀವನ ಸಾರ್ಥಕವಾಗುತ್ತದೆ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಅಭಿಪ್ರಾಯಪಟ್ಟರು.
ತಾಲೂಕಿನ ಕೈವಾರ ಯೋಗಿನಾರಾಯಣ ಮಠದ ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ಶ್ರೀರಾಮ ನವಮಿಯ ಅಂಗವಾಗಿ ರಾಮ ನಾಮದ ಮಹಿಮೆ ಎಂಬ ವಿಷಯದ ಬಗ್ಗೆ ವಿಶೇಷ ಕೀರ್ತನ ನೀಡಿದರು.
ರಾಮನಾಮ ಸ್ಮರಣೆಯನ್ನು ಯಾರೂ ಯಥಾವತ್ತಾಗಿ ಮಾಡುವರೋ ಅವರಿಗೆ ರಾಮನಾಮದ ಫಲ ದೊರೆಯುತ್ತದೆ ಎಂದು ಭಕ್ತರಿಗೆ ಅರಿವು ಮೂಡಿಸಿದರು.
ವಿವಿಧೆಡೆ ರಾಮನವಮಿ: ತಾಲೂಕಿನ ಬೂರಗವಾಕಲಹಳ್ಳಿ ಶ್ರೀ ವೀರಾಂಜನೇಯಸ್ವಾಮಿ, ಕುರುಟಹಳ್ಳಿಯ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯ, ಕೈವಾರದ ಅಮರನಾರಾಯಣಸ್ವಾಮಿ ದೇವಾಲಯ, ಕಂಗಾನಹಳ್ಳಿ ಭಕ್ತಾನಂಜನೇಯ ಸ್ವಾಮಿ ದೇವಾಲಯ, ಬಟ್ಲಹಳ್ಳಿ ಶ್ರೀ ಸೀತಾರಾಮಾಂಜನೇಯಸ್ವಾಮಿ ದೇವಾಲಯ ಸೇರಿದಂತೆ ನಗರದ ವರದಾಂಜನೇತಸ್ವಾಮಿ ಬೆಟ್ಟ, ಕೈಲಾಸಗಿರಿ ಬೆಟ್ಟ, ಶ್ರೀ ಹರಿಹರೇಶ್ವದ ದೇವಾಲಯ ಹಾಗೂ ನಾಮಾ ರಂಗಯ್ಯ ಸೇವಾ ಟ್ರಸ್ಟ್ ವತಿಯಿಂದ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಶ್ರೀರಾಮನವಮಿ ಪ್ರಯುಕ್ತ ಹೆಸರು ಬೇಳೆ, ಪಾನಕ, ಮಜ್ಜಿಗೆಯನ್ನು ವಿತರಿಸಲಾಯಿತು.