ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅರಾಭಿಕೊತ್ತನೂರಿನಲ್ಲಿ ಅದ್ಧೂರಿ ಜಾತ್ರೆ

Vishwanath S
Updated On : 22 Apr 2014, 12:55 pm

ಕನ್ನಡಪ್ರಭ ವಾರ್ತೆ, ಕೋಲಾರ, ಏ.21
ದೇವಾಲಯಗಳ ನಗರಿ ಎಂದೇ ಕರೆಯಲ್ಪಡುವ ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಕಡೆ ಜಾತ್ರೆ, ಬ್ರಹ್ಮ ರಥೋತ್ಸವ, ಕರಗ ಇತ್ಯಾಧಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದು ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಸೋಮವಾರ ನಡೆದ ದೊಡ್ಡಜಾತ್ರೆ ವಿಶೇಷವಾಗಿತ್ತು.
ಶ್ರೀ ಸಿದ್ದೇಶ್ವರ, ಬೀರೇಶ್ವರ, ಭತ್ತೇಶ್ವರ, ಬೆಳ್ಳೂರೇಶ್ವರ, ಬಿಡದೀಶ್ವರಸ್ವಾಮಿ ಪಂಗಡಕ್ಕೆ ಸೇರಿದ ಕುರುಬ ಸಮಾಜದ ಸಾವಿರಾರು ಜನರು ವೈಷಮ್ಯ, ಬಂಧು ಕಲಹಕ್ಕೆ ಇತಿಶ್ರೀ ಹಾಡುವ ಮೂಲಕ ದೊಡ್ಡಜಾತ್ರೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದರು.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು, ಮೈಸೂರು, ತಮಿಳುನಾಡಿನ ಹೊಸೂರು ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಕುರುಬ ಸಮಾಜದವರು ಇನ್ನು ಮುಂದೆ ಯಾವುದೇ ಜಗಳ, ಮನಸ್ತಾಪವಿಲ್ಲದೆ ಪಂಗಡದ ಎಲ್ಲರೂ ಸಹಬಾಳ್ವೆಯಿಂದ ಜೀವಿಸುವುದಾಗಿ ದೇವರ ಮುಂದೆ ಪ್ರತಿಜ್ಞೆ ಸ್ವೀಕರಿಸಿದ್ದು ದೊಡ್ಡ ಜಾತ್ರೆಯ ಪ್ರಮುಖ ಘಟ್ಟವಾಗಿತ್ತು. ಅರಾಭಿಕೊತ್ತನೂರು ಪುಟ್ಟ ಗ್ರಾಮವಾಗಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಜನರು ಭಾನುವಾರವೇ ಗ್ರಾಮದ ಹತ್ತಾರು ಕಡೆ ಪೆಂಡಾಲ್ ಹಾಕಿಕೊಂಡು ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ನೀಡಿದರು. ನಿನ್ನೆ ಬಸವನ ಸಮೇತ ಗುರುಗಳ ಆಹ್ವಾನ, ಮಧ್ಯಾಹ್ನ ಗಂಗಾಪೂಜೆ, ಸಂಜೆ ದೊಡ್ಡಜಾತ್ರೆಗೆ ಆಗಮಿಸಿದ್ದ ಕುರುಬರ ಕೂಟ ಸೇರಿ ಸಂಕಲ್ಪ ಮಾಡಲಾಯಿತು.
ತೆಂಗಿನಕಾಯಿ ಪವಾಡ: ಭಾನವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಸಿದ್ದೇಶ್ವರ, ಬೀರೇಶ್ವರ, ಭತ್ತೇಶ್ವರ, ಬೆಳ್ಳೂರೇಶ್ವರ, ಬಿಡದೀಶ್ವರಸ್ವಾಮಿ ಪಂಗಡಕ್ಕೆ ಸೇರಿದ ಕುರುಬ ಮನೆತನದ ಹಿರಿಯರು, ಮಕ್ಕಳು, ಸಂಬಂಧಿಕರು ಸೇರಿ ವೀರಗಲ್ಲುಗಳ ಮುಂದೆ ಹೊಸ ಬಟ್ಟೆ ಇಟ್ಟು ಪೂಜೆ ನಂತರ ಹಿರಿಯರಿಗೆ ಅರ್ಪಿಸಿದರು. ಹರಿಶಿನ ಮತ್ತು ಶ್ರೀಗಂಧ ಲೇಪನದ ತೆಂಗಿನಕಾಯಿಗಳನ್ನು ಹರಿಕೆ ಹೊತ್ತ ವೀರ ಕುಮಾರರ ತಲೆ ಮೇಲೆ ಒಂದೊಂದಾಗಿ ಹೊಡೆಯುವಾಗ ನೆರದಿದ್ದ ಭಕ್ತರು ಮೂಕ ವಿಸ್ಮಿತರಾಗಿದ್ದರು, ಕಾರ್ಯಕ್ರಮದ ಸಂಘಟಕರು ಹಾಗೂ ಪೂಜಾರಿಗಳು ದೇವರ ಘೋಷಣೆಯೊಂದಿಗೆ ತೆಂಗಿನಕಾಯಿ ಪವಾಡವನ್ನು ಯಶಸ್ವಿಗೊಳಿಸಿದರು. ದೊಡ್ಡಜಾತ್ರೆಗೆ ಬಂದಿದ್ದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮಿ, ಶಾಸಕ ಎಂ.ಟಿ.ಬಿ. ನಾಗರಾಜ್ ಸಮುದಾಯ ಇದೇ ರೀತಿ ಸದಾಕಾಲ ಒಗ್ಗಟ್ಟಿನಿಂದ ಇರಬೇಕೆಂದು ಸಂದೇಶ ಸಾರಿದರು. ಸಂಜೆ 6 ಗಂಟೆಗೆ ಹೆಣ್ಣು ಮಕ್ಕಳು ತವರು ಮನೆಯ ದೀಪವನ್ನು ತೆಗೆದುಕೊಂಡು ತಲೆ ಮೇಲೆ ಹೊತ್ತು ಊರಿನಲ್ಲಿ ಮೆರವಣಿಗೆಯ ನಂತರ ದೇವರ ಬಳಿ ಇಟ್ಟು ಬಂಡಾರ ಹಾಕಿದ ನಂತರ ತಂಬಿಟ್ಟು ಪ್ರಸಾದವನ್ನು ಎಲ್ಲರಿಗೂ ಹಂಚಿ ಜಾತ್ರೆಗೆ ತೆರೆ ಎಳೆದರು.
ಈ ಜಾತ್ರೆಗೆ ಪುರಾಣ ಕತೆಯ ಸ್ಪರ್ಶ
ಕುರುಬ ಸಮುದಾಯ ಪ್ರತಿ ಮೂರು ವರ್ಷಕ್ಕೆ ಇಲ್ಲವೇ ಐದು ವರ್ಷಕ್ಕೊಮ್ಮೆ ದೊಡ್ಡಜಾತ್ರೆ ನಡೆಸಲು ಶ್ರೀ ವೀರಭದ್ರೇಶ್ವರ ಸ್ವಾಮಿಯ ಪ್ರೇರಣೆ ಮತ್ತು ಅನುಗ್ರಹ ಕಾರಣ. ದಕ್ಷ ಬ್ರಹ್ಮ ಎಂಬುವನು ತನ್ನ ತಪಸ್ಸಿಗೆ ಭಂಗ ಮಾಡಿದನೆಂಬ ಕಾರಣಕ್ಕೆ ಶ್ರೀ ವೀರಭದ್ರನು ದಕ್ಷಬ್ರಹ್ಮನ ಸಂಹಾರ ಮಾಡುತ್ತಾನೆ.
  ಆಗ ದಕ್ಷ ಬ್ರಹ್ಮನ ಪತ್ನಿ ವೀರಭದ್ರನ ಬಳಿ ಬಂದು ನನ್ನ ಗಂಡ ಯಾವುದೇ ತಪ್ಪು ಮಾಡಿಲ್ಲ, ಯಾಗ ಮಾಡುತ್ತಿದ್ದ, ನಿನ್ನ ತಪಸ್ಸಿಗೆ ಯಾವುದೇ ಭಂಗ ಉಂಟು ಮಾಡಿಲ್ಲವೆಂದು ಹೇಳಿ ಪತಿಯ ಪ್ರಾಣ ಉಳಿಸುವಂತೆ ಬೇಡುತ್ತಾಳೆ.
   ಈ ಮಾತೆಯ ಮಾತು ನಂಬಿದ ವೀರಭದ್ರ, ನಿನ್ನ ಗಂಡನನ್ನು ಉಳಿಸಬೇಕಾದರೆ ಬೇರೆ ಯಾವುದಾದರೊಂದು ತಲೆಯನ್ನು ತರುವಂತೆ ಹೇಳುತ್ತಾನೆ. ದಕ್ಷ ಬ್ರಹ್ಮನ ಪತ್ನಿ ಗಂಡನ ಪ್ರಾಣ ಉಳಿಸಿಕೊಳ್ಳಲು ಕುರಿಯೊಂದರ ತಲೆ ಕಡಿದು ತಂದು ಕೊಡುತ್ತಾಳೆ. ಇದರಿಂದ ದಕ್ಷಬ್ರಹ್ಮನ ಪ್ರಾಣವನ್ನು ವೀರಭದ್ರ ಉಳಿಸುತ್ತಾನೆ.
   ಆದರೆ, ಕುರಿಯನ್ನು ಕೊಂದ ಹಿನ್ನಲೆಯಲ್ಲಿ ಕುರಿ ಮೇಯಿಸುತ್ತಿದ್ದ ವ್ಯಕ್ತಿ ಬೇರೊಬ್ಬರ ಪ್ರಾಣ ಉಳಿಸಲು ನನ್ನ ಕುರಿಯನ್ನು ಬಲಿ ತೆಗೆದುಕೊಂಡಿದ್ದು ಸರಿಯೇ ಎಂದು ಪ್ರಶ್ನಿಸಿದಾಗ ವೀರಭದ್ರನು ಕುರಿ ಮೇಯಿಸುವ ವ್ಯಕ್ತಿಗೆ ಸಮಾಧಾನ ಹೇಳಿ, ನಿನ್ನ ಬಳಿ ಇರುವ ಕುರಿಗಳ ಸಂಖ್ಯೆ ಹೆಚ್ಚಾಗುವಂತೆ ನಿನ್ನ ಮನೆ ದೇವರಾಗಿ ಕಾಪಾಡುತ್ತೇನೆಂದು ಹೇಳುವ ಮೂಲಕ ಕುರುಬ ಸಮಾಜದ ರಕ್ಷಕನಾಗಿರುವುದರಿಂದ ದೊಡ್ಡಜಾತ್ರೆ ಆಚರಿಸಲಾಗುತ್ತಿದೆ ಎಂದು ಕುರುಬ ಸಮಾಜದ ಮುಖಂಡ, ಬಿಜೆಪಿ ರಾಜ್ಯ ಸ್ಲಮ್ ಮೋರ್ಚಾ ಕಾರ್ಯದರ್ಶಿ ನೀಲಿ ಕೆ. ಜಯಶಂಕರ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement