ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಟೌನ್ ಠಾಣೆಗೆ ಶುಕ್ರ ದಸೆ

Vishwanath S
Updated On : 22 Apr 2014, 12:56 pm

ಕೋಲಾರ: ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಕೋಲಾರ ನಗರ ಪೊಲೀಸ್ ಠಾಣೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.
ಶತಮಾನ ಪೂರೈಸಿರುವ ಈ ಕಟ್ಟಡ ಸದ್ಯದಲ್ಲಿಯೇ ನಾಮಾವಶೇಷವಾಗಲಿದ್ದು ಸುಸಜ್ಜಿತ ನೂತನ ಕಟ್ಟಡ ತಲೆ ಎತ್ತಲಿದೆ. ಕ್ರಿ.ಶ. 1912ರಲ್ಲಿ ನಿರ್ಮಾಣಗೊಂಡ ನಗರ ಪೊಲೀಸ್ ಠಾಣೆ ಕಟ್ಟಡ, 2012 ಕ್ಕೆ 100 ವರ್ಷ ಪೂರೈಸಿ ಶತಮಾನದ ಗಡಿದಾಟಿ ಸಂಭ್ರಮದ ಶತಮಾನೋತ್ಸವವನ್ನು ಆಚರಿಸಿಕೊಂಡಿದೆ. ಈ ಪೊಲೀಸ್ ಠಾಣೆ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು ಮಳೆಗಾಲದಲ್ಲಿ ಕೆಲಸ ಮಾಡುವುದಕ್ಕೆ ಸಮಸ್ಯೆಯಾಗಿದೆ. ಠಾಣೆಯ ವಿವಿಧ ವಿಭಾಗಗಳ ಆಡಳಿತ ವ್ಯವಸ್ಥೆಗೆ ಜಾಗದ ಕೊರತೆ ಇರುವುದರಿಂದ ಕೆಲವು ವರ್ಷಗಳ ಹಿಂದೆಯೇ ನವೀಕರಣಕ್ಕೆ ಯೋಚಿಸಲಾಗಿತ್ತು. ಕೆಲವೇ ದಿನಗಳಲ್ಲಿ ಈ ಹಳೇ ಕಟ್ಟಡವನ್ನು ಕೆಡವಿ ಹಾಕಿ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲು ಜಿಲ್ಲಾ ಪೊಲೀಸ್ ಇಲಾಖೆ ನಿರ್ಧರಿಸಿದೆ. ನಗರ ಪೊಲೀಸ್ ಠಾಣೆಯನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವುದರಿಂದ ತಾತ್ಕಾಲಿಕವಾಗಿ ಬೇರೆ ಕಡೆ ನಗರ ಠಾಣೆಯನ್ನು ವರ್ಗಾವಣೆ ಮಾಡಲು ಸೂಕ್ತವಾದ ಬಾಡಿಗೆ ಕಟ್ಟಡಕ್ಕೆ ಜಾಗ ಹುಡುಕಲಾಗುತ್ತಿದೆ. ಕ್ರಿ.ಶ 1872 ರಲ್ಲಿ ಪೊಲೀಸ್ ವ್ಯವಸ್ಥೆ ಜಾರಿಗೆ ತಂದ ಅಂದಿನ ಲಾರ್ಡ್ ಬೌರಿಂಗ್ ಅವರು ಮೈಸೂರು ಸಂಸ್ಥಾನದಲ್ಲಿ ಅಳವಡಿಸಿ 1831 ರಿಂದ 1880 ರ ಅವಧಿಯ 50 ವರ್ಷದಲ್ಲಿ ಸುಮಾರು 9 ಕಮೀಷನರ್‌ಗಳು ಆಳ್ವಿಕೆ ನಡೆಸಿದ್ದಾರೆ. ಆನಂತರ ಬಂದ ಲಾರ್ಡ್ ಕರ್ಜನ್ 1912 ರಲ್ಲಿ ಕೋಲಾರದ ಗಾಂಧಿ ವನದ ಮುಂಭಾಗದಲ್ಲಿ ಟೌನ್ ಪೊಲೀಸ್ ಠಾಣೆ ಕಟ್ಟಡವನ್ನು ನಿರ್ಮಾಣ ಮಾಡಿಸಿದ್ದಾರೆ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಳ್ವಿಕೆ ನಡೆಸಿದ ಕಾಲಾವಧಿಯಲ್ಲಿ ನಗರದ ಎಸ್.ಎನ್.ಆರ್ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲೂ ಸಾಕಷ್ಟು ಬದಲಾವಣೆ ಆಗುತ್ತಿದೆ. ಟೌನ್ ಪೊಲೀಸ್ ಠಾಣೆಗೆ ಶುಕ್ರದಸೆ ಕಂಡು ಬಂದಿದ್ದು, ಯಾವುದೇ ಕಾರಣಕ್ಕೂ ಈ ಹಿಂದಿನ ಗತವೈಭವಕ್ಕೆ ಧಕ್ಕೆಯಾಗದ ರೀತಿಯಲ್ಲಿ ಹೊಸ ಠಾಣೆ ನಿರ್ಮಿಸಬೇಕೆಂಬುದು ನಗರ ಜನತೆಯ ಆಶಯವಾಗಿದೆ.
ಪಿಎಸ್‌ಐಗೆ ದೈಹಿಕ ಶಿಕ್ಷೆ ನೀಡಿದ ಎಸ್ಪಿ
ಕೋಲಾರ: ಪ್ರಕರಣವೊಂದರ ಬಗ್ಗೆ ಗಮನಕ್ಕೆ ತರಲಿಲ್ಲವೆಂಬ ಕಾರಣಕ್ಕೆ ಕಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ದಿನವಿಡೀ ಪೊಲೀಸ್ ಮೈದಾನದಲ್ಲಿ ಫೆರೇಡ್ ಮಾಡಿಸಿ ದೈಹಿಕ ಶಿಕ್ಷೆ ನೀಡಿರುವ ವಿಲಕ್ಷಣ ಪ್ರಸಂಗ ಬೆಳಕಿಗೆ ಬಂದಿದೆ.
ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಠಾಣೆಯ ಪಿಎಸ್‌ಐ ಎಸ್ಪಿ ಅವರ ಕೆಂಗಣ್ಣಿಗೆ ಬಿದ್ದು ದೈಹಿಕ ಶಿಕ್ಷೆಗೆ ಗುರಿಯಾಗಿದ್ದಾರೆ.   ಮಾಸ್ತಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣವೊಂದರ ಬಗ್ಗೆ ನೇರ ಮಾಹಿತಿ ನೀಡಿಲ್ಲ ಎಂಬ ಕಾರಣಕ್ಕೆ ಶಿಸ್ತಿನ ಹೆಸರಿನಲ್ಲಿ ಎಸ್ಪಿ ಅಜಯ್ ಹಿಲೋರಿ ಅವರು ಈ ಶಿಕ್ಷೆಯನ್ನು ಜಾರಿ ಮಾಡಿದ್ದಾರೆನ್ನಲಾಗಿದ್ದು ನಾಳೆಯೂ ಈ ಶಿಕ್ಷೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಚುನಾವಣಾ ಕಾರ್ಯದ ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಿದ್ದ ಪಿಎಸ್‌ಐ ಅವರು ತಡ ರಾತ್ರಿಯಾದ ಕಾರಣ ಕರ್ತವ್ಯ ಮುಗಿಸಿದ ಬಳಿಕ ವಿಶ್ರಾಂತಿಗೆ ತೆರಳಿದ್ದಾರೆ, ಇದರ ನಡುವೆ ನಡೆದ ಪ್ರಕರಣವೊಂದರ ಬಗ್ಗೆ ತಮ್ಮ ಮೇಲಿನ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತಾದರೂ ತಮ್ಮ ಗಮನಕ್ಕೆ ತರಲಿಲ್ಲವೆಂಬ ಕಾರಣಕ್ಕೆ ಈ ಶಿಕ್ಷೆ ನೀಡಿದ್ದಾರೆ.
ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪಿಎಸ್‌ಐ ಪ್ರಕರಣವೊಂದರ ಬಗ್ಗೆ ತನ್ನ ಮೇಲಾಧಿಕಾರಿಗೆ ತಿಳಿಸಿದ್ದಾರೆ.
ಇದನ್ನು ಎಸ್ಪಿ ಗಮನಕ್ಕೆ ತರಬೇಕಾದರೂ ಸದರಿ ಮೇಲಾಧಿಕಾರಿ. ಆದರೆ, ಶಿಕ್ಷೆ ಅನುಭವಿಸುತ್ತಿರುವುದು ಪಿಎಸ್‌ಐ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಇಲಾಖೆಯ ಸಿಬ್ಬಂದಿ ಒಳ್ಳೆಯವರಿಗೆ ಕಾಲವಿಲ್ಲವೆಂದು ಗೊಣಗಾಡುತ್ತಿದ್ದಾರೆ.
ಬಿಸಿಲಿನಲ್ಲಿ ಬಳಲಿರುವ ಸದರಿ ಪಿಎಸ್‌ಐ ನಾನೇನು ಹೇಳಲಾರೆ-ನೀವೇನು ಕೇಳಬೇಡಿ ಇದು ಇಲಾಖೆಯ ವಿಚಾರ ಹಿರಿಯ ಅಧಿಕಾರಿಯ ಆದೇಶ ಪಾಲಿಸುವುದಷ್ಟೇ ತನ್ನ ಕೆಲಸವೆಂದು ಶಿಕ್ಷೆಯನ್ನು ಪ್ರಾಮಾಣಿಕವಾಗಿಯೇ ಅನುಭವಿಸುತ್ತಿದ್ದು ಮಂಗಳವಾರ ಈ ಅಧಿಕಾರಿಗೆ ಮುಕ್ತಿ ಸಿಗುವುದೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ತಪ್ಪಿಗೆ ವಿಷಾದ, ಉತ್ತಮ ಸೇವೆಗೆ ವಾಗ್ದಾನ
ಕನ್ನಡಪ್ರಭ ವಾರ್ತೆ, ಕೋಲಾರ, ಏ.21
ನಗರದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಸ್ಥಾಪನೆಗೊಂಡ ಆರ್.ಎಲ್.ಜಾಲಪ್ಪ ನಾರಾಯಣ ಹಾರ್ಟ್ ಸೆಂಟರ್‌ನಲ್ಲಿ ಈ ಹಿಂದೆ ಇದ್ದ ವೈದ್ಯರು ಮತ್ತು ಆಡಳಿತ ವರ್ಗದಿಂದ ರೋಗಿಗಳಿಗೆ ಏನಾದರೂ ತೊಂದರೆಯಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಹೊಸ ತಂಡದಿಂದ ಇನ್ನು ಮುಂದೆ ಉತ್ತಮ ಸೇವೆ ನೀಡಲಾಗುತ್ತದೆ ಎಂದು ಆರ್.ಎಲ್.ಜಾಲಪ್ಪ ನಾರಾಯಣ ಹಾರ್ಟ್ ಸೆಂಟರ್‌ನ ವ್ಯವಸ್ಥಾಪಕ ಇಮಾನ್ಯುಯಲ್ ವಾಗ್ದಾನ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ಬೆಂಗಳೂರಿನಲ್ಲಿರುವ ನಾರಾಯಣ ಹೃದಯಾಲಯದ ಮಾದರಿಯಲ್ಲೇ ಆರ್.ಎಲ್.ಜಾಲಪ್ಪ ನಾರಾಯಣ ಹಾರ್ಟ್ ಸೆಂಟರ್‌ನಲ್ಲೂ ಹೃದ್ರೋಗಕ್ಕೆ ಸಂಬಂಧಿಸಿದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ, ತಪಾಸಣೆಗಾಗಿ ಆತ್ಯಾಧುನಿಕ ಯಂತ್ರೋಪಕರಣಗಳ ವ್ಯವಸ್ಥೆ ಮಾಡಲಾಗಿದೆ' ಎಂದರು.
ಈ ಹಿಂದೆ ರೋಗಗಳಿಗೆ ವೈದ್ಯರು ಮತ್ತು ಆಡಳಿತ ಮಂಡಳಿಯ ಕಡೆಯಿಂದ ಸಾಕಷ್ಟು ತೊಂದರೆಯಾಗಿದೆ. ಹಣಕ್ಕಾಗಿ ಪೀಡಿಸುವುದನ್ನು ಬಿಡಬೇಕು. ಬಡ ರೋಗಿಗಳ ಮೇಲೆ ಕನಿಕರ ತೋರಬೇಕು. ಹಣ ಗಳಿಕೆಯ ಮಾನದಂಡವಾದರೆ ರೋಗಿಗಳ ಗತಿ ಏನು ಎಂದು ಪತ್ರಕರ್ತರು ಕೆಲವು ಘಟನೆಗಳನ್ನು ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಇಮಾನ್ಯುಯಲ್, 'ಈ ಹಿಂದೆ ಏನಾಗಿದೆ ಎಂಬುದು ತಮ್ಮ ಗಮನಕ್ಕೆ ಬಂದಿಲ್ಲ. ಹೊಸ ತಂಡ ಈಗ ಕಾರ್ಯ ನಿರ್ವಹಿಸುತ್ತಿದ್ದು ಇನ್ನು ಮುಂದೆ ಯಾವುದೇ ರೋಗಿಗೂ ನಮ್ಮಿಂದ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ' ತಿಳಿಸಿದರು. ಹೃದ್ರೋಗ ತಜ್ಞ ಡಾ.ಪ್ರದೀಪ್‌ಕುಮಾರ್ ಮಾತನಾಡಿ, 'ಇನ್ನು ಮುಂದೆ ಜಿಲ್ಲೆಯಲ್ಲಿ ನಮ್ಮ ಆಸ್ಪತ್ರೆಯ ವತಿಯಿಂದ ಹೃದ್ರೋಗ ತಪಾಸಣೆ ಶಿಬಿರಗಳನ್ನು ನಡೆಸುತ್ತೇವೆ. ಬಡ ರೋಗಿಗಳ ಅನುಕೂಲಕ್ಕಾಗಿ ಕೇವಲ 450ಕ್ಕೆ ವಿಶೇಷ ಹಾರ್ಟ್ ಪ್ಯಾಕೇಜ್ ಸೌಲಭ್ಯ ಅನುಷ್ಠಾಕ್ಕೆ ತರಲಾಗಿದೆ' ಎಂದರು. ಡಾ. ಈರಣ್ಣ ಎಸ್.ಹೀರಾಪುರ್, ಡಾ.ನಾರಾಯಣಸ್ವಾಮಿ ಇದ್ದರು.
'ದೇಶದ ಸಂಸ್ಕೃತಿ ಉಳಿಸುವ ಕೆಲಸವಾಗಲಿ'
ಮಾಲೂರು: ಪೋಷಕರು ಮಕ್ಕಳನ್ನು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ ದೇಶದ ಸಂಸ್ಕೃತಿಯನ್ನು ಉಳಿಸಬೇಕಾದ ಅನಿವಾರ್ಯತೆ ಇದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟಾರ್ ಟಿ.ಜಿ. ನರಸಿಂಹಮೂರ್ತಿ ಹೇಳಿದರು.
ಪಟ್ಟಣದ ತಿರುಮಲ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಸ್ಥಳೀಯ ಶ್ರೀ ಲಲಿತಾ ಕಲಾ ಅಕಾಡೆಮಿ ವಾರ್ಷಿಕೋತ್ಸವ ಹಾಗೂ ಮಕ್ಕಳ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ಟಿವಿ, ಕಂಪ್ಯೂಟರ್ ಹಾವಳಿ ಮಧ್ಯೆ ಮಕ್ಕಳು ಪಾಶ್ಚತ್ಯ ಸಂಸ್ಕೃತಿಗಳ ಕಡೆ ವಾಲುತ್ತಿದ್ದಾರೆ ಎಂದರು. ಕೇಂದ್ರ ಚಲನಚಿತ್ರ ಪ್ರಮಾಣಿಕರಣ ಮಂಡಳಿಯ ಸದಸ್ಯ ಎನ್.ಆರ್. ಜ್ಞಾನ ಮೂರ್ತಿ ಮಾತನಾಡಿದರು.
ಮಕ್ಕಳು ರಚಿಸಿದ ಸುಮಾರು ನೂರಕ್ಕೂ ಹೆಚ್ಚು ಚಿತ್ರಪಟಗಳ ಪ್ರದರ್ಶನವನ್ನು ಗಣ್ಯರು ಉದ್ಘಾಟಿಸಿದರು. ಲಲಿತಾ ಕಲಾ ಅಕಾಡೆಮಿಯ ಮಕ್ಕಳಿಂದ ಭರತ ನಾಟ್ಯ, ಸುಗುಮ ಸಂಗೀತ ಕಾರ್ಯಕ್ರಮಗಳು ನಡೆದವು. ಪ್ರಸನ್ನ ಕುಮಾರ್, ವಿದ್ವಾನ್ ಕೊಳ್ಳೇಗಾಲ ಎಸ್. ಗೋಪಾಲ್ ಕೃಷ್ಣ, ಮಂಜುನಾಥ್, ಲಲಿತಾ ಅಕಾಡೆಮಿಯ ಉಮೇಶ್, ಅಧ್ಯಕ್ಷೆ ಅರುಣಾ, ಭಾಗ್ಯಲಕ್ಷ್ಮಿ ಇದ್ದರು.
ಕೊಲೆ ಪ್ರಕರಣ: ಇಬ್ಬರ ಬಂಧನ
ಕೋಲಾರ/ಮುಳಬಾಗಿಲು: ಮುಳಬಾಗಿಲು ಪಟ್ಟಣ ಸಮೀಪದ ನೂಗಲಬಂಡೆ ಬಳಿ ಇರುವ ಮೆಕ್ಕಾ ಮಸೀದಿಗೆ ನುಗ್ಗಿ ಪವಿತ್ರ ಕುರಾನ್ ಗ್ರಂಥವನ್ನು ಹರಿದಿದ್ದಾನೆಂಬ ಹಿನ್ನೆಲೆಯಲ್ಲಿ ಇಮ್ರಾನ್ ಎಂಬುವನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
  ರೆಹಮತ್ ನಗರದ ವಾಸಿಗಳಾದ ಮುನೀರ್ ಹಾಗೂ ನವಾಜ್ ಪೊಲೀಸ್ ವಿಚಾರಣೆಗೆ ಒಳಪಟ್ಟವರಾಗಿದ್ದಾರೆ. ಏ.20ರಂದು ಬೆಳಗ್ಗೆ 8 ಗಂಟೆಯಲ್ಲಿ ಸೈಯದ್ ಚಾಂದ್ ಪಾಷ ಮಗನಾದ ಇಮ್ರಾನ್ ಮನೆಯಲ್ಲಿ ಟೀ ಕುಡಿದು ತನ್ನನ್ನು ಯಾರೋ ಕರೆಯುತ್ತಿದ್ದಾರೆ ಎಂದು ಹೇಳಿ ಮನೆಯಿಂದ ಹೊರಗೆ ಹೋಗಿದ್ದನು. ನಂತರ ಸಂಜೆ 6.30 ಕ್ಕೆ ಮಸೀದಿಯ ಜಮಾತ್ ಅವರು ಇಮ್ರಾನ್ ತಂದೆಗೆ ನಿನ್ನ ಮಗ ಮಸೀದಿ ಮುಂಭಾಗದ ಛತ್ರದ ಬಳಿ ಇದ್ದಾನೆ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸು ಎಂದು ತಿಳಿಸಿದ್ದಾರೆ. ಅದರಂತೆ ಸೈಯದ್ ಚಾಂದ್ ಪಾಷ ಹೋಗಿ ನೋಡಿದಾಗ ಮಗ ಇಮ್ರಾನ್ ಮೃತ ದೇಹ ಅಲ್ಲಿ ಬಿದ್ದಿತ್ತು. ಮಗನನ್ನು ಯಾರೋ ಕೊಲೆ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದರು.
 ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿಯವರು ಆರೋಪಿಗಳ ಪತ್ತೆಗಾಗಿ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ರಾತ್ರೆಯೇ ಪೊಲೀಸರು ಕಾರ್ಯಾಚರಣೆ ನಡೆಸಿ ಮಸೀದಿಯ ಬಳಿ ಯಾರ್ಯಾರು ಇದ್ದರು ಎಂಬ ಮಾಹಿತಿ ಆಧರಿಸಿ ರೆಹಮತ್ ನಗರದ ಮುನೀರ್ ಹಾಗೂ ನವಾಜ್ ಎಂಬುವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಮುಂಜಾಗ್ರತಾ ಕ್ರಮದಿಂದಾಗಿ ಈಗ ಪರಿಸ್ಥಿತಿ ತಹಬದಿಗೆ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
ವಾಲಿಬಾಲ್ ಪಂದ್ಯಾವಳಿ
ಕೋಲಾರ: ವಿವೇಕಾನಂದ ವಾಲಿಬಾಲ್ ಸಂಘ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಏ. 25ರಿಂದ 27ರವರೆಗೆ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳನ್ನು ನಗರದ ಕುರುಬರಪೇಟೆಯಮಿನಿ ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ ರು. 35,000, ದ್ವಿತೀಯ ಬಹುಮಾನ ರು. 25,000 ಹಾಗೂ ತೃತೀಯ ಬಹುಮಾನ ರು. 15,000, ನಾಲ್ಕನೇ ಬಹುಮಾನ ರು. 10,000 ಹಾಗೂ ಆಕರ್ಷಕ ಟ್ರೋಪಿ ನೀಡಲಾಗುತ್ತದೆ. ಭಾಗವಹಿಸುವ ತಂಡಗಳು ಏ.25 ರಂದು ನೋಂದಣೆ ಮಾಡಿಕೊಳ್ಳತಕ್ಕದ್ದು, ಹಾಗೂ ಭಾಗವಹಿಸುವ ಎಲ್ಲಾ ತಂಡಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ.  ಮಾಹಿತಿಗೆ ಕಾರ್ಯದರ್ಶಿ ಸುರೇಶ್ ಕುಮಾರ್ ಮೊ.9448316059, ಸಂತೋಶ್ ಕುಮಾರ್ ಮೊ. 8147895337. ನಾಗಭೂಷಣ್ ಗೌಡ-9060860454 ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement