ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ಜಾಗೃತಿ
ಕೆಜಿಎಫ್: 'ಶಾಲೆ ಬಿಟ್ಟ ಮಕ್ಕಳು ಮರಳಿ ಶಾಲೆ' ಅಭಿಯಾನದಡಿ ಮನೆ ಮನೆ ತೆರಳಿ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸವಂತೆ ಕೆಜಿಎಫ್ ಶೈಕ್ಷಣಿಕ ವಲಯದ ಶಿಕ್ಷಣಾಧಿಕಾರಿ ಟಿ.ಕೃಷ್ಣಮೂರ್ತಿ ನೇತೃತ್ವದಲ್ಲಿ ಮನವಿ ಮಾಡಲಾಯಿತು.
ಶಿಕ್ಷಣ ಇಲಾಖೆ ಅಧಿಕಾರಿಗಳು ಕಳೆದ ಮೂರು ತಿಂಗಳಿಂದ ಶಾಲೆಗೆ ಬರುತ್ತಿದ್ದ ಮಕ್ಕಳು ಶಾಲೆಯನ್ನು ತೊರೆದಂಥ ಮಕ್ಕಳ ಬಗ್ಗೆ ಸರ್ವೆ ನಡೆಸಿ ಆ ಮಕ್ಕಳನ್ನು ಮರಳಿ ಶಾಲೆಗೆ ಬರುವಂತೆ ಜಾಗೃತಿ ಮೂಡಿಸಿದರು. ಕ್ಷೇತ್ರದಲ್ಲಿ ಸುಮಾರು 10ರಿಂದ 15 ಮಕ್ಕಳನ್ನು ಪತ್ತೆ ಹಚ್ಚಿದ್ದು, ಅಂಥ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಉದ್ದೇಶದಿಂದ ನಗರದ ಇ.ಟಿ.ಬ್ಲಾಕ್ ಮತ್ತು ಗೋಣಮಾಕನಹಳ್ಳಿ ಶಾಲೆಯಲ್ಲಿ ನಾಳೆಯಿಂದ ಮೂರು ತಿಂಗಳವರೆಗೆ ತರಬೇತಿ ನೀಡಲಾಗುವುದು. ಇದಕ್ಕಾಗಿ ಒಬ್ಬ ಶಿಕ್ಷಕರನ್ನು ಮತ್ತು ಎನ್‌ಜಿಒ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಈ ಸಂದರ್ಭದಲ್ಲಿ ತಿಳಿಸಿದರು.
ಎಲ್ಲೆಲ್ಲಿ?: ನಗರದ ಆರ್‌ಇಟಿ ಬ್ಲಾಕ್, ಎಸ್.ಟಿ.ಬ್ಲಾಕ್, ಇ.ಟಿ.ಬ್ಲಾಕ್, ಕೆಎನ್‌ಜಿಎಸ್ ಬ್ಲಾಕ್, ಲೋಯರ್ ಮಸ್ಕಂ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಶಾಲೆಯನ್ನು ತೊರೆದ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಅವರ ಪೋಷಕರ ಮನವೊಲಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸಂಪನ್ಮೂಲ ಅಧಿಕಾರಿಗಳಾದ ನಾರಾಯಣಸ್ವಾಮಿ ಸೇರಿದಂತೆ ಎಲ್ಲಾ ಬಿಆರ್‌ಸಿ ಮತ್ತು ಸಿಆರ್‌ಸಿ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.