ಗೆಲವಿನ ಚಂಚಲೆ ಸಿಗುತ್ತಿಲ್ಲ ಕೈಗೆ!
ಕನ್ನಡಪ್ರಭ ವಾರ್ತೆ, ಕೋಲಾರ, ಏ.22
ಚುನಾವಣೆ ಮುಗಿದು ಆರು ದಿನಗಳು ಕಳೆದಿದೆ. ದಿನಕ್ಕೊಂದು ಮಾಹಿತಿ ಸ್ಫೋಟಗೊಳ್ಳುತ್ತಿರುವುದರಿಂದ ಮತದಾನೋತ್ತರ ಲೆಕ್ಕಾಚಾರ ತಿರುಗು ಮುರುಗಾಗುವ ಲಕ್ಷಣಗಳು ಕಾಣಬರುತ್ತಿವೆ.
ಕಾಂಗ್ರೆಸ್ನ ಮುನಿಯಪ್ಪ ಹಾಗೂ ಬೆಂಬಲಿಗರು ಕನಿಷ್ಠ 25ರಿಂದ 40 ಸಾವಿರ ಮತಗಳ ಅಂತರದಿಂದ ಗೆಲ್ಲುವುದಾಗಿ ಹೇಳುತ್ತಿದ್ದರೆ, ಜೆಡಿಎಸ್ನ ಕೇಶವ ಮತ್ತು ಅವರ ಮುಖಂಡರು ಈ ಬಾರಿ ಕೋಲಾರ ಕ್ಷೇತ್ರ ನಮ್ಮದಾಗುತ್ತದೆ ಎಂದು ಬಿಗುತ್ತಿದ್ದಾರೆ.
ಇನ್ನು ಬಿಜೆಪಿಯ ಎಂ.ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಕಿತ್ತಾಟದ ಲಾಭ ನನಗೆ ವರದಾನವಾಗಿದೆ ಎಂದು ತಮ್ಮದೇ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಗೆಲುವಿನ ಕನಸು ಕಾಣುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯ ಪರವಾಗಿ ಮತ ಹಾಕಲು ಬಲಗೈ ಜನಾಂಗಕ್ಕೆ ಇಷ್ಟವಿಲ್ಲದೆ ಸಮುದಾಯದ ಸುಮಾರು 2 ಲಕ್ಷಕ್ಕೂ ಹೆಚ್ಚು ಮತಗಳು ಕಾಂಗ್ರೆಸ್ ಪಾಲಾಗಿವೆ. ಹಾಗಾಗಿ ಮುಸ್ಲಿಮರು, ಒಕ್ಕಲಿಗರು ಕೈಕೊಟ್ಟಿದ್ದರೂ ಮುನಿಯಪ್ಪ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿ ಕೇಶವ ಚುನಾವಣೆಗೆ ಮೂರು ದಿನ ಮುಂಚಿತವಾಗಿಯೇ 'ಯುದ್ಧ ಭೂಮಿ'ಯಿಂದ ದೂರ ಸರಿದಿದ್ದರು. ಇದರಿಂದ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿಯತ್ತ ವಾಲಿದ್ದಾರೆ. ಹೀಗಿದ್ದಾಗ್ಯೂ, ಪಕ್ಷದ ಮೇಲಿನ ಅಭಿಮಾನಕ್ಕಿಂತ ಮಾಜಿ ಸಿಎಂ ಕುಮಾರಸ್ವಾಮಿ ಮೇಲಿನ ಪ್ರೀತಿಯಿಂದ ಕೆಲವರು ಕೆಲಸ ಮಾಡಿದ್ದಾರೆ. ಒಂದು ವೇಳೆ ಕೇಶವ ಗೆದ್ದರೆ ಅದು ನಿಷ್ಠಾವಂತ ಕಾರ್ಯಕರ್ತರ ಪರಿಶ್ರಮದ ಫಲವೇ ಹೊರತು ಕೇಶವ ವರ್ಚಸ್ಸು ಅಲ್ಲವೆಂದು ಕುಮಾರಸ್ವಾಮಿ ಅಪ್ತರು ಅಭಿಪ್ರಾಯ.
ಮುನಿಯಪ್ಪ ವಿರುದ್ಧ ಮುನಿಸು?: ಕಾಂಗ್ರೆಸ್ಸಿನ ಮುನಿಯಪ್ಪ ವಿರುದ್ಧ ಈ ಬಾರಿ ಮುಸ್ಲಿಂ ಸಮುದಾಯ ಮುನಿಸಿಕೊಂಡಿದ್ದುದ್ದು ನಿಜ. ಜೆಡಿಎಸ್ ಪರವಾಗಿ ಮತ ಹಾಕಲು ನಿರ್ಧರಿಸಿದ್ದು ಹೌದು. ಆದರೆ, ಮೋದಿ ಪ್ರಧಾನಿಯಾದರೆ ಅಪಾಯವೆಂಬ ಕಾರಣಕ್ಕೆ ಹಾಗೂ ಜೆಡಿಎಸ್ ಗೆದ್ದು ಎನ್ಡಿಎ ಬೆಂಬಲಿಸಿದರೆ ನಮಗೆ ಹೋರಾಟ ವಿಫಲವಾಗಬಹುದೆಂಬ ಭಯದಿಂದ ಮುಸ್ಲಿಮ ಸಮುದಾಯದ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಪರ ಮತ ಹಾಕಿರುವ ಸಾಧ್ಯತೆ ಇದೆ ಎನ್ನುತ್ತಾರೆ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು. ಚಿಂತಾಮಣಿಯಲ್ಲಿ ಜೆಡಿಎಸ್ 30ರಿಂದ 40 ಸಾವಿರ ಲೀಡ್ ಪಡೆದು ಬಂಗಾರಪೇಟೆ, ಮಾಲೂರು, ಕೋಲಾರದಲ್ಲಿ ಮೂರು ಪಕ್ಷಗಳು ಸಮಬಲದ ಹೋರಾಟ ನಡೆಸಿದ್ದರೆ ಮುನಿಯಪ್ಪ ಗೆಲುವಿನ ಅಂತರ ಕಡಿಮೆ ಆಗಬಹುದು. ಆದರೆ, ಕೋಲಾರ ಮತ್ತು ಮುಳಬಾಗಲಿನಲ್ಲಿ ಕಾಂಗ್ರೆಸ್ ಲಕ್ಷಕ್ಕಿಂತ ಹೆಚ್ಚು ಮುನ್ನಡೆ ಹೊಂದಿದಲ್ಲಿ ಮುನಿಯಪ್ಪ ಗೆಲುವನ್ನು ಯಾರಿಂದಲೂ ತಡೆಯಲಾಗದು ಎಂದು ಅವರು ವಿಶ್ಲೇಷಿಸಿದರು. ಬಲಗೈ ಜನಾಂಗದ 2 ಲಕ್ಷ, ಮುಸ್ಲಿಮರ 35ರಿಂದ 40 ಸಾವಿರ ಮತಗಳು ಕಾಂಗ್ರೆಸ್ಗೆ ಬಿದ್ದಿದ್ದರೆ ಮುನಿಯಪ್ಪ 7ನೇ ಬಾರಿಗೆ ಸಂಸತ್ ಪ್ರವೇಶಿಸುವುದು ಖಚಿತವಾಗುತ್ತದೆ. ಒಂದು ವೇಳೆ ಮತದಾರರು ಬದಲಾವಣೆ ಬಯಸಿದ್ದರೆ ಫಲಿತಾಂಶ ಏರುಪೇರು ಆಗಬಹುದು ಎಂದು ಹೇಳಿದರು.
ಬೆಟ್ಟಿಂಗ್ ಅಷ್ಟಿಲ್ಲ: ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆಂಬುದು ಯಕ್ಷ ಪ್ರಶ್ನೆ. ಮತದಾರರು ತಮ್ಮ ಮುದ್ರೆ ಒತ್ತಿಯಾಗಿದೆ. ಹಾಗಾಗಿ ಬೆಟ್ಟಿಂಗ್ ಭರಾಟೆ ಇನ್ನು ಜೋರಾಗಿಲ್ಲ. ಚಿಂತಾಮಣಿಯಲ್ಲಿ ಮಾತ್ರ ಜೆಡಿಎಸ್ ಪರವಾಗಿ ಬೆಟ್ಟಿಂಗ್ ನಡೆಯುತ್ತಿದೆ. ಮಾಲೂರು, ಬಂಗಾರಪೇಟೆ ಪಟ್ಟಣ ಹಾಗೂ ಕೋಲಾರ ನಗರ ಪ್ರದೇಶದಲ್ಲಿ ಬಿಜೆಪಿ ಪರವಾಗಿ, ಶಿಡ್ಲಘಟ್ಟ, ಶ್ರೀನಿವಾಸಪುರ, ಮುಳಬಾಗಲು ಪಟ್ಟಣದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪರವಾಗಿ ಸಮಾನ ಬೆಟ್ಟಿಂಗ್ ನಡೆಯುತ್ತಿದೆ.
ಚಿಂತಾಮಣಿಯಲ್ಲಿ ಜೆಡಿಎಸ್ಗೆ ಮುನ್ನಡೆ ಸಾಧ್ಯತೆ
ಚಿಂತಾಮಣಿಯಲ್ಲಿ ಮಾತ್ರ ಜೆಡಿಎಸ್ ಹೆಚ್ಚು ಲೀಡ್ ಪಡೆಯಬಹುದು. ಶಿಡ್ಲಘಟ್ಟ, ಮುಳಬಾಗಲು, ಮಾಲೂರು, ಶ್ರೀನಿವಾಸಪುರ ಹಾಗೂ ಕೋಲಾರದಲ್ಲಿ ಕಾಂಗ್ರೆಸ್ಗೆ ಡ್ಯಾಮೇಜ್ ಕಂಟ್ರೋಲ್ಗೆ ಬೇಕಾಗುವಷ್ಟು ಮತಗಳ ಲಭಿಸಿವೆ ಎಂಬುದು ಆ ಪಕ್ಷದ ಮುಖಂಡರ ಲೆಕ್ಕಾಚಾರ. ಬಂಗಾರಪೇಟೆ, ಕೆಜಿಎಫ್ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಬಹುದೆಂಬುದನ್ನು ಕಾಂಗ್ರೆಸ್ ಮುಖಂಡರು ಒಪ್ಪಿಕೊಳ್ಳುತ್ತಿಲ್ಲ. ಈ ಎರಡೂ ಕ್ಷೇತ್ರಗಳಲ್ಲಿನ ಪರಿಶಿಷ್ಟ ಜಾತಿಗೆ ಸೇರಿದ ಮತದಾರರು ಕಾಂಗ್ರೆಸ್ ಬೆಂಬಲಿಸಿದ್ದಾರೆಂಬುದು ಮತ್ತೊಂದು ಖುಷಿ.
-ಪಾ.ಶ್ರೀ.ಅನಂತರಾಮ್