ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಗರಸಭಾ ಸದಸ್ಯ ಆತ್ಮಹತ್ಯೆಗೆ ಯತ್ನ

Vishwanath S
Updated On : 23 Apr 2014, 12:53 pm

ಕ.ಪ್ರ. ವಾರ್ತೆ, ಕೆಜಿಎಫ್, ಏ.22
ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರಸಭಾ ಸದಸ್ಯರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾದ ಘಟನೆ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಆರ್‌ಪಿಐನ ಅಮುಲ್ ದಾಸ್ ಎಂಬುವವರೇ ಆತ್ಮಹತ್ಯೆಗೆ ಮುಂದಾದ ನಗರಸಭಾ ಸದಸ್ಯ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಚಾಂಪಿಯನ್‌ರೀಫ್ ಠಾಣಾ ಪಿಎಸ್‌ಐ ರಾಮಕೃಷ್ಣಪ್ಪ ನನಗೆ ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತು, ಸೋಮವಾರ ರಾತ್ರಿ 12 ಗಂಟೆಯ ಸಮಯದಲ್ಲಿ ಅಮುಲ್‌ದಾಸ್  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರನ್ನು ತಕ್ಷಣ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಏನಾಗಿತ್ತು..?:  ಏ.19 ರಂದು ಚಾಂಪಿಯನ್‌ರೀಫ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿ ಅಮುಲ್‌ದಾಸ್ ಮತ್ತು ಬಡಾವಣೆಯ ನಾಗರಿಕರ ಮಧ್ಯೆ ಜಗಳವಾಗಿತ್ತು. ಈ ವೇಳೆ ನಂದಿನಿ ರಾಜಶೇಖರ್ ಜತೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು. ಈ ಹಿನ್ನಲೆಯಲ್ಲಿ ಅಮುಲ್‌ದಾಸ್ ಅವರ ಮಕ್ಕಳಾದ ಪ್ರೇಮ್, ಪ್ರವೀಣ್‌ಕುಮಾರ್ ಹಾಗೂ ಅಳಿಯನಾದ ಕಾರ್ತಿಕ್ ನಂದಿನಿ ಅವರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ಮನೆಯಲ್ಲಿದ್ದ ಟಿವಿ ಸೇರಿದಂತೆ ಇತರೆ ವಸ್ತುಗಳನ್ನು ಜಖಂಗೊಳಿಸಿಸಿದ್ದಾರೆ ಎಂದು ನಂದಿನಿ ಚಾಂಪಿಯನ್‌ರೀಫ್ ಠಾಣೆಯಲ್ಲಿ ದೂರು ನೀಡಿದ್ದರು. ಇದೇ ವೇಳೆ, ನಂದಿನಿ ಸಂಬಂಧಿಕರೂ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಅಮುಲ್ ದಾಸ್ ದೂರು ನೀಡಿದ್ದರು. ಬಳಿಕ ಇಬ್ಬರನ್ನು ಠಾಣೆಗೆ ಕರೆಯಿಸಿಕೊಂಡ ಪೊಲೀಸರು ರಾಜಿ ಸಂಧಾನ ಮಾಡಿದ್ದರು. ನಂದಿನಿ ಅವರಿಗೆ ಅಮುಲ್ ದಾಸ್ ಅವರು ಟೀವಿ ಕೊಡಿಸುವುದಾಗಿ ತಿಳಿಸಿದ್ದರು. ಆದರೆ, ಘಟನೆ ನಡೆದು ಮೂರು ದಿನಗಳಾದರೂ ರಾಜಿಯಂತೆ ಅಮುಲ್ ದಾಸ್ ನಡೆದುಕೊಳ್ಳಲಿಲ್ಲ. ಈ ಬಗ್ಗೆ ಪಿಎಸ್‌ಐ ರಾಮಕೃಷ್ಣಪ್ಪ ತಿಳಿಸಿದರೂ ಇದಕ್ಕೆ ಕ್ಯಾರೇ ಅಂದಿರಲಿಲ್ಲ. ಹಾಗಾಗಿ, ಠಾಣೆಗೆ ಬರುವಂತೆ ಪಿಎಸ್‌ಐ ತಿಳಿಸಿದ್ದರು. ತಾವೊಬ್ಬ ಜನಪ್ರತಿನಿಧಿ ಎಂಬುದನ್ನು ಲೆಕ್ಕಿಸದೇ ಪಿಎಸ್‌ಐ ಅವರು ಠಾಣೆಗೆ ಕರೆಯಿಸಿ, ಎಲ್ಲರೆದುರು ಹೊಡೆದಿದ್ದಾರೆ. ಇದರಿಂದ ನೋವಾಗಿದೆ. ಹಾಗಾಗಿ ಬೇಸತ್ತು ಆತ್ಮಹತ್ಯೆಗೆ ಮುಂದಾದೆ ಎಂದು ಆಸ್ಪತ್ರೆಯಲ್ಲಿರುವ ಅಮುಲ್ ದಾಸ್ ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.
ಆಸ್ಪತ್ರೆಗೆ ಪೊಲೀಸ್ ಉಪರಕ್ಷಣಾಧಿಕಾರಿ ಎ.ಕೆ.ವಿವೇಕಾನಂದ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement