ಶೃಂಗೇರಿ ಬಳಿ ಶೂಟೌಟ್ ಸಿಪಿಐಗೆ ಒಪ್ಪಿಸಿ
ಬಾಗೇಪಲ್ಲಿ: ಶೃಂಗೇರಿ ತಾಲೂಕು ತನಿಕೋಡು ಅರಣ್ಯ ತಪಾಸಣಾ ಠಾಣೆ ಬಳಿ ನಕ್ಸಲ್ ನಿಗ್ರಹ ದಳದವರು ಯುವಕ ಕಬೀರ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದರ ಜೊತೆಗೆ ಮೃತನ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ಪರಿಹಾರ ನೀಡಬೇಕೆಂದು ಸಿಪಿಐಎಂ ಒತ್ತಾಯಿಸಿದೆ.
ಸುಂದರಯ್ಯ ಭವನದಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿದ ಸಿಪಿಎಂನ ಕಾರ್ಯಕರ್ತರು ಸಾರಿಗೆ ಬಸ್ ನಿಲ್ದಾಣದ ಮುಂಭಾಗ ರಸ್ತೆ ತಡೆ ನಡೆಸಿದರು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂನ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಪಿ. ಮುನಿವೆಂಕಟಪ್ಪ, ತನಿಕೋಡು ಅರಣ್ಯ ತಪಾಸಣಾ ಠಾಣೆ ಬಳಿ ನಕ್ಸಲ್ ನಿಗ್ರಹ ದಳದವರು ಯಾವುದೇ ರೀತಿಯ ವಿಚಾರಣೆಗೆ ಒಳಪಡಿಸದೇ ಏಕಾಏಕಿಯಾಗಿ ಕಬೀರ್ ಎಂಬ ಯುವಕನನ್ನು ಗುಂಡಕ್ಕಿ ಹತ್ಯೆ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೃತನ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ರು. ಪರಿಹಾರ ಘೋಷಣೆ ಮಾಡಿದೆ ಹಾಗೂ ಈ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಿದೆಯಾದರೂ ಸಿಓಡಿ ತನಿಖೆಯಿಂದ ಸಮರ್ಪಕವಾಗಿ ಸತ್ಯಾಂಶ ಹೊರಕ್ಕೆ ಬರುವುದಿಲ್ಲ ಎಂದು ಆರೋಪಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದರು.
ಮಂಗಳೂರಿನ 4 ನಿರುದ್ಯೋಗಿ ಯುವಕರು ಕಳೆದ ಸುಮಾರು 9 ತಿಂಗಳಿಂದ ಯಾವುದೇ ಕೆಲಸವಿಲ್ಲದೆ ಅಧಿಕೃತವಾಗಿ ಪರವಾನಗಿಯನ್ನು ಪಡೆದು ತೀರ್ಥಹಳ್ಳಿಯಿಂದ ಮಂಗಳೂರಿಗೆ ಜಾನುವಾರುಗಳನ್ನು ಕಸಾಯಿಖಾನೆಗೆ ವಾಹನವೊಂದಲ್ಲಿ ಸಾಗಾಣಿಕೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ನಕ್ಸಲ್ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಬಂಡೀಪುರ ಅಭಯಾರಣ್ಯವನ್ನು ಪ್ರವೇಶ ಮಾಡುವುದಕ್ಕೂ ಮುನ್ನ ಚೆಕ್ ಪೋಸ್ಟ್‌ನಲ್ಲಿ ತನಿಖೆ ನಡೆಸಿದ ನಂತರವೇ ವಾಹನಗಳ ಮುಂದಕ್ಕೆ ಬಿಡಲಾಗುತ್ತದೆ. ಆದರೆ ಈ ಯುವಕ ಟಿಕೆಟ್ ಖರೀದಿಸಲು ವಾಹನದಿಂದ ಕೆಳಗೆ ಇಳಿದು ಬರುತ್ತಿದ್ದಾಗ ನಕ್ಸಲ್‌ನೆಂದು ಭಾವಿಸಿ ಅಲ್ಲಿನ ರಕ್ಷಣಾ ಪಡೆಯವರು ಯಾವುದೇ ರೀತಿಯಲ್ಲಿ ವಿಚಾರಣೆ ಮಾಡದೆ ಗುಂಡಿಕ್ಕಿ ಕೊಂದಿದ್ದಾರೆಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರಾದ ಮಹಮದ್ ಅಕ್ರಂ, ಜಬೀವುಲ್ಲಾ, ಮಾಜಿ ಸದಸ್ಯ ಅಬ್ದುಲ್ ಮಜೀದ್, ಸಿಪಿಎಂ ಮುಖಂಡರಾದ ಚನ್ನರಾಯಪ್ಪ, ಹೇಮಚಂದ್ರ, ನಲ್ಲಪರೆಡ್‌ಡಿಪಲ್ಲಿ ಚಂದ್ರಶೇಖರರೆಡ್ಡಿ, ಪಿ.ವಿ.ಮಂಜುನಾಥರೆಡ್ಡಿ, ರಾಮಲಿಂಗಪ್ಪ, ಗೋವರ್ಧನಚಾರಿ, ಆಂಜನೇಯರೆಡ್ಡಿ, ವಾಲ್ಮೀಕಿ ಅಶ್ವಥ್ಥಪ್ಪ, ಜಿ. ಕೃಷ್ಣಪ್ಪ, ಸುಬ್ಬರಾಯಪ್ಪ, ಪಿ.ಎಸ್.ರಮೇಶ್, ಬರಕುತುಲ್ಲಾ, ನಾರಾಯಣಸ್ವಾಮಿ, ರವಿ, ಲೋಕೇಶ್ ಕುಮಾರ್ ಭಾಗವಹಿಸಿದ್ದರು.
ಗುಡಿಬಂಡೆಯಲ್ಲಿ ಪ್ರತಿಭಟನೆ
ಗುಡಿಬಂಡೆ: ಶೃಂಗೇರಿ ಬಳಿಯ ಚೆಕ್ ಪೋಸ್ಟ್‌ನಲ್ಲಿ ಕಬೀರ್ ಮೇಲೆ ಮೇಲೆ ನಡೆದ ಶೂಟೌಟ್ ಖಂಡಿಸಿ ಸಿಪಿಎಂ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಪಕ್ಷದ ತಾಲೂಕು ಕಾರ್ಯದರ್ಶಿಜಯರಾಮರೆಡ್ಡಿ, ಅಮಾಯಕ ವ್ಯಕ್ತಿಯ ಮೇಲೆ ನಕ್ಸಲ್ ನಿಗ್ರಹ ದಳ ಸಿಬ್ಬಂದಿ ಗುಂಡು ಹಾರಿಸಿ ಕೊಂದಿರುವ ಕೃತ್ಯ ಘೋರ ಮತ್ತು ಅಮಾನುಷವಾದದ್ದು. ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಪರಿಹಾರ ಮೊತ್ತವನ್ನು 30 ಲಕ್ಷಕ್ಕೇರಿಸಬೇಕು ಎಂದು ಹೇಳಿದರು. ಸಂಘಟನೆಯ ಪದಾಧಿಕಾರಿ ಶಿವಪ್ಪ ಮಾತನಾಡಿದರು. ಪ್ರತಿಭಟನೆಯಲ್ಲಿ ಈಶ್ವರಪ್ಪ, ದೇವರಾಜು ಹಲವರು ಇದ್ದರು.