ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಳೆ ದ್ವೇಷ: ದಾಯಾದಿಗಳ ಘರ್ಷಣೆ

Vishwanath S
Updated On : 23 Apr 2014, 12:53 pm

ಚಿಂತಾಮಣಿ: ಹಳೇ ದ್ವೇಷವನ್ನು ಕಾರಣವಾಗಿಟ್ಟುಕೊಂಡು ದಾಯಾದಿಗಳ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ಮುರುಗಮಲ್ಲ ಹೋಬಳಿ ಚಿಕ್ಕಕರಕಮಾಕಲಹಳ್ಳಿ ಗ್ರಾಮದ ಚೌಡಪ್ಪ ಮತ್ತು ವೆಂಕಟಪ್ಪ ಇಬ್ಬರು ದಾಯಾದಿಗಳಿಗೆ ಸಂಬಂಧಿಸಿ ಹಳೆ ದ್ವೇಷದ ಹಿನ್ನೆಯಲ್ಲಿ ಕಳೆದ 2 ದಿನಗಳ ಹಿಂದೆ ಗ್ರಾಮದ ನೀರಿನ ಟ್ಯಾಂಕ್ಬ್‌ಳಿ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸಿದ್ದರು.
ಇದರ ಪರಿಣಾಮ ಚೌಡಪ್ಪ ಹಾಗೂ ವೆಂಕಟಪ್ಪ 2 ಕಡೆಯ ಕೃಷ್ಣಪ್ಪ, ಮಂಜು, ನಾಗೇಶ್, ಲಕ್ಷ್ಮಿದೇವಮ್ಮ ಹಾಗೂ ಮಂಜುನಾಥ, ಆಂಜಪ್ಪ, ವೆಂಕಟಪ್ಪ ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರುಳು ದಿಬ್ಬ ಕುಸಿದು ಕಾರ್ಮಿಕ ಸಾವು
ಚಿಂತಾಮಣಿ: ಮರುಳು ದಿಬ್ಬ ಮೈಮೇಲೆ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಬೈರೇಬಂಡ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮೃತನನ್ನು ವೆಂಕಟರವಣಪ್ಪ(40) ಎಂದು ಗುರುತಿಸಲಾಗಿದೆ. ಗ್ರಾಮದ ಹೊರ ವಲಯದ ಖಾಸಗಿ ವ್ಯಕ್ತಿಯೊಬ್ಬರ ವ್ಯಾಪ್ತಿಗೆ ಒಳಪಡುವ ಕೆರೆ ಅಂಗಳದಲ್ಲಿ ಮರಳು ತೆಗೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮರಳು ದಿಬ್ಬು ಕಾರ್ಮಿಕನ ಮೇಲೆ ಬಿದ್ದಿದೆ. ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗ್ರಾಮದ ಹಲವು ಮುಖಂಡರು ಈ ಘಟನೆಗೆ ಸಂಬಂಧಿಸಿ ಪಂಚಾಯ್ತಿ ನಡೆಸಿ, ಮೃತನ ಕುಟುಂಬಕ್ಕೆ ಪರಿಹಾರ ಕೊಡಿಸಲು ಮುಂದಾಗಿದ್ದಾರೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಟ್ಲಹಳ್ಳಿ ಪೋಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಸತ್ತಿರಲಿಲ್ಲ, ಕೋಮಾಗೆ ಜಾರಿದ್ದ!
ಟೇಕಲ್: ಸತ್ತಿದ್ದಾನೆಂದು ನಂಬಿದ್ದ ವ್ಯಕ್ತಿ ಬದುಕಿ ಬಂದ ಕಥೆ ಇದೆ.
ಭಾನುವಾರ ಟೇಕಲ್-ಮಾಲೂರು ರಸ್ತೆಯ ನಾರಾಯಣಪುರ ಗೇಟ್ ಬಳಿ ಟ್ರಾಕ್ಟರ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿತ್ತು.
   ಈ ಅಪಘಾತದಲ್ಲಿ ಬೈಕ್ ಸವಾರ ಶ್ರೀನಿವಾಸ್ ಮೃತಪಟ್ಟಿದ್ದಾನೆಂದು ಎಲ್ಲ ಟಿವಿ ಹಾಗೂ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಪೊಲೀಸರಿಗೂ ಆತ ಸತ್ತಿದ್ದಾನೆಂದು ತಿಳಿಸಲಾಗಿತ್ತು. ಆದರೆ, ಅಪಘಾತದ ವೇಳೆ ತೀವ್ರ ಪ್ರಜ್ಞಾಶೂನ್ಯನಾಗಿದ್ದ ಶ್ರೀನಿವಾಸ್‌ನನ್ನು ಕೋಲಾರದ ದೇವರಾಜ್ ಅರಸ್ ಮೆಡಿಕಲ್ ಕಾಲೇಜಿನಲ್ಲಿ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು.
   ಪಾನ ಮತ್ತನಾಗಿ ಗಾಡಿ ಚಲಾಯಿಸಿದ್ದು ಹಾಗೂ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದರಿಂದ ಆತ ನಾಲ್ಕು ಗಂಟೆಗಳ ಕಾಲ ಕೋಮಾಗೆ ಜಾರಿದ್ದ. ನಂತರ ಆತ ಚೇತರಿಸಿಕೊಂಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ನಕಲಿ ಅಂಕಪಟ್ಟಿ ಹಾವಳಿ; ವರದಿ ಕೇಳಿದ ಶಿಕ್ಷಣ ಸಚಿವ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಅಂಕ ತಿದ್ದುಪಡಿ ಪ್ರಕರಣ ಕುರಿತಂತೆ ವರದಿ ನೀಡುವಂತೆ ವಿವಿ ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಆದೇಶಿಸಿದ್ದಾರೆ.
ವಿಶ್ವವಿದ್ಯಾಲಯದ ಸಿಬ್ಬಂದಿಗಳ ಕೈವಾಡದಿಂದಲೇ ಅಂಕಪಟ್ಟಿ ತಿದ್ದುಪಡಿಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಓದಿದ್ದೇನೆ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, 3 ದಿನಗಳಲ್ಲಿ ವಿವಿ ಕುಲಪತಿ ಹಾಗೂ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಂದ ಖುದ್ದು ವರದಿ ಕೇಳಿದ್ದೇನೆ. ಆ ಬಳಿಕ ರಾಜ್ಯ ಸರ್ಕಾರ ತುರ್ತು ಕ್ರಮ ಜರುಗಿಸಲಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ. ಏತನ್ಮಧ್ಯೆ ಅಂಕಪಟ್ಟಿ ಅಕ್ರಮ ಕುರಿತಂತೆ ಸಿಂಡಿಕೇಟ್ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಮಧ್ಯಾಂತರ ವರದಿ ಕೇಳಲಾಗಿದೆ. ಏ.25ರಂದು ನಡೆಯಲಿರುವ ಸಿಂಡಿಕೇಟ್ ಸಭೆಯಲ್ಲಿ ಈ ಪ್ರಕರಣ ಕುರಿತು ನಿರ್ಣಯ ತೆಗೆದುಕೊಳ್ಳಲು ಕುಲಪತಿ ನಿರ್ಧರಿಸಿದ್ದಾರೆ.
ಇದಕ್ಕೂ ಮುಂಚೆ ಬೆಂಗಳೂರು ವಿವಿಯಲ್ಲಿ ನಕಲಿ ಅಂಕಪಟ್ಟಿ ಹಾವಳಿ ಹೆಚ್ಚಾಗಿತ್ತು. ಆದರೆ ಈಗ ಅಧಿಕೃತ ಪ್ರಮಾಣಪತ್ರದಲ್ಲಿ ಅಂಕವನ್ನೇ ತಿದ್ದುತ್ತಿರುವುದು ವಿವಿಯ ಚಿಂತೆಗೆ ಕಾರಣವಾಗಿದೆ. ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ವಿಶೇಷ ಕಾರ್ಯಪಡೆಯ ರಚಿಸುವ ಬಗೆಗೂ ಚಿಂತಿಸಲಾಗುತ್ತಿದೆ.
ನದಿಗೆ ಭೂಗತ ತಡೆಗೋಡೆ ಕಾಮಗಾರಿ ಕಳಪೆ: ಆರೋಪ
ಗೌರಿಬಿದನೂರು: ತಾಲೂಕಿನ ಚಿಕ್ಕಕುರುಗೋಡು ಗ್ರಾಮದ ಬಳಿ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ 78 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಭೂಗತ ತಡೆಗೋಡೆಯ ಕಾಮಗಾರಿಯು ಕಳಪೆ ಕಾಮಗಾರಿಯಿಂದ ಕೂಡಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಚಿಕ್ಕಕುರುಗೋಡು ಗ್ರಾಮದ ಸೋಮಶೇಖರರೆಡ್ಡಿ ಆಗ್ರಹಿಸಿದ್ದಾರೆ.
ಕುಸಿಯುತ್ತಿರುವ ಅಂತರ್ಜಲವನ್ನು ಸಂರಕ್ಷಿಸುವ ಉದ್ದೇಶದಿಂದ ಕ್ಷೇತ್ರದ ಶಾಸಕ ಎನ್. ಎಚ್. ಶಿವಶಂಕರರೆಡ್ಡಿ ಅವರು ಉತ್ತರ ಪಿನಾಕಿನಿ ನದಿಗೆ ಭೂಗತ ಅಡ್ಡಗೋಡೆಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿರ್ಮಿಸಲು ಯೋಜನೆಯನ್ನು ಮಂಜೂರು ಮಾಡಿಸಿದ್ದಾರೆ. ಆದರೆ, ಕಾಮಗಾರಿಯ ನಿರ್ಮಾಣಕ್ಕೆ ಸೀಮೆಂಟು, ಜಲ್ಲಿ ಮತ್ತು ಮರಳನ್ನು ನಿಗದಿತ ಅನುಪಾತದಲ್ಲಿ ಬಳಸದೆ ಇರುವುದರಿಂದ ಕಾಮಗಾರಿ ಕಳಪೆಯಾಗಿದೆ. ಸಮರ್ಪಕವಾಗಿ ಕ್ಯೂರಿಂಗ್ ಕೂಡಾ ಮಾಡಿಲ್ಲ. ಕಟ್ಟಡದ ಕೆಲವು ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಬಗ್ಗೆ ಉಸ್ತುವಾರಿ ವಹಿಸಿ ಕಾಮಗಾರಿಯ ಗುಣಮಟ್ಟವನ್ನು ಕಾಪಾಡಬೇಕಾಗಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕೂತಿದ್ದಾರೆ ಎಂದು ಆರೋಪಿಸಿದ್ದಾರೆ.
ಕವಿವಾಣಿ ಮಾಸ ಪತ್ರಿಕೆ ಲೋಕಾರ್ಪಣೆ
ಚಿಂತಾಮಣಿ: ತಾಲ್ಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನವತಿಯಿಂದ ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಮನೆಗೊಂದು ಕವಿಗೋಷ್ಠಿ ಕಾರ್ಯಕ್ರಮದಲ್ಲಿ 'ಕವಿವಾಣಿ' ಮಾಸ ಪತ್ರಿಕೆಯು ಲೋಕಾರ್ಪಣೆಯಾಯಿತು.
ತಾಲ್ಲೂಕು ಸಿರಿಗನ್ನಡ ವೇದಿಕೆಯ ಸಾರಥ್ಯದಲ್ಲಿ ಮೂಡಿಬಂದಿರುವ ಈ ಪತ್ರಿಕೆಯನ್ನು ಹಿರಿಯ ವೇದಾಂತಿ ಹಾಗೂ ಆಧ್ಯಾತ್ಮಿಕ ಗುರುಗಳಾದ ಗಡದಾಸನಹಳ್ಳಿ ಶ್ರೀ ಈರೇಗೌಡ ಸ್ವಾಮೀಜಿಯವರು ಬಿಡುಗಡೆಗೊಳಿಸಿ ಮಾತನಾಡಿದ ಅವರು, 'ಕಾವ್ಯ ರೂಪದಲ್ಲಿ ಮೂಡಿಬರುವ ಕವಿಗಳ ಮನದಾಳದ ಭಾವನೆಗಳನ್ನು ಜನಸಾಮಾನ್ಯರಿಗೆ ತಿಳಿಯಪಡಿಸುವಲ್ಲಿ ಪತ್ರಿಕೆಗಳು ಬಹಳ ಸಹಕಾರಿಯಾಗಿವೆ' ಎಂದರು. ಪತ್ರಿಕೆಯ ಸಂಪಾದಕ ಕೆ.ಎನ್.ಅಕ್ರಂಪಾಷ ಮಾತನಾಡಿದರು. ತಾಲೂಕಿನ ಚುಸಾಪ ಅಧ್ಯಕ್ಷ ಕಾಗತಿ ವಿ.ವೆಂಕರತ್ನಂ ಹಾಗೂ ಬರಹಗಾರ ಕೋಲಾರದ ಡ್ಯಾನಿಡ್ ಕೃಷ್ಣಮೂರ್ತಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪೋಸ್ಟ್ ನಾರಾಯಣಸ್ವಾಮಿ, ಶರಣಪ್ಪ ಗಬ್ಬೂರು, ಶಿ.ಮ.ಮಂಜುನಾಥ್, ವಿ.ಚಲಪತಿ, ಸೀಕಲ್ ನರಸಿಂಹಪ್ಪ, ಅಶ್ವಥಪ್ಪ ಹಾಜರಿದ್ದರು.
ಜೀತದಾಳು ಬಳಕೆ; ಗಣಿ
ಮಾಲೀಕಗೆ 7 ವರ್ಷ ಜೈಲು
ಬೆಂಗಳೂರು: ಕಲ್ಲು ಗಣಿಗಾರಿಕೆಗೆ 27 ಜನರನ್ನು ಜೀತದಾಳಾಗಿ ಬಳಸಿಕೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ ಮೊಲಕಚೆರುವುಪಳ್ಳಿಯ ಕಲ್ಲು ಗಣಿಯ ಮಾಲಿಕನೊಬ್ಬನಿಗೆ ಬಾಗೇಪಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯ, ಏಳು ವರ್ಷಗಳ ಸಜೆ ಹಾಗೂ 21 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಗಣಿಯ ಮಾಲಿಕ ಕೃಷ್ಣ ರೆಡ್ಡಿ ಎಂಬಾತನಿಗೆ ನ್ಯಾಯಾಲಯ, 1976ರ ಜೀತ ಪದ್ಧತಿ ನಿಷೇಧ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆಯ ಅಡಿಯಲ್ಲಿ ಈ ಶಿಕ್ಷೆ ವಿಧಿಸಿದೆ.
ಗಣಿ ಸಂಸ್ಥೆಯೊಂದರಲ್ಲಿ ಜನರನ್ನು ಜೀತದಾಳುಗಳಂತೆ ಬಳಸಿಕೊಳ್ಳಲಾಗತ್ತಿದೆ ಎಂಬ ಮಾಹಿತಿಯ ಮೇರೆಗೆ 2010ರ ಆಗಸ್ಟ್ 31ರಂದು ಬಾಗೇಪಲ್ಲಿಯ ತಹಶೀಲ್ದಾರ್ ಹನುಮಂತರಾಯ ಅವರು ಚಿಕ್ಕಬಳ್ಳಾಪುರದ ಮೊಲಕಚೆರುವುಪಳ್ಳಿಯ ಕಲ್ಲುಗಣಿಯೊಂದರ ಮಾಲಿಕ ಕೃಷ್ಣ ರೆಡ್ಡಿ, 19 ಮಂದಿಯನ್ನು ಜೀತದಾಳುಗಳಾಗಿ ಹಾಗೂ 8 ಮಕ್ಕಳನ್ನು ಬಾಲಕಾರ್ಮಿಕರಾಗಿ ಬಳಸಿಕೊಳ್ಳುತ್ತಿದ್ದ ಪ್ರಕರಣ ಬಯಲಿಗೆ ಬಂದಿತ್ತು. ಅದರಂತೆ, ಕೃಷ್ಣರೆಡ್ಡಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ, ಆತನಿಗೆ ಎರಡು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ಮೀಟರ್ ಇಲ್ಲದ ಆಟೋ ರಿಕ್ಷಾ
ಪ್ರಯಾಣ ದರ ಇನ್ನು ಕನಿಷ್ಠ 20
ಕೋಲಾರ: ಡಿಜಿಟಲ್  ಫೇರ್ ಮೀಟರ್ ಅನ್ನು ಹೊಂದಿರುವ ಆಟೋ ರಿಕ್ಷಾಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕನಿಷ್ಠ  25 ನೀಡಬೇಕೆಂದು ಕಳೆದ ಫೆ.11ರಂದು ಹೊರಡಿಸಿದ್ದ ಆದೇಶವನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದೆ.
ಫೆ.11ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಆಟೋ ರಿಕ್ಷಾ ಕ್ಯಾಬ್‌ಗಳಿಗೆ ಡಿಜಿಟಲ್ ಫೇರ್ ಮೀಟರ್ ಅನ್ನು ಕಡ್ಡಾಯವಾಗಿ ಅಳವಡಿಸಲು ಸೂಚಿಸಲಾಗಿತ್ತು. ಡಿಜಿಟಲ್ ಮೀಟರ್ ಅಳವಡಿಸಿದ ಆಟೋರಿಕ್ಷಾಗಳಿಗೆ ಮಾತ್ರ ಅನ್ವಯಿಸುವಂತೆ ಕನಿಷ್ಠ ದರವನ್ನು 20 ರಿಂದ 25ಕ್ಕೆ  ನಿಗದಿಪಡಿಸಲಾಗಿತ್ತು.  ಆದರೆ ಇದುವರೆವಿಗೂ ನಗರದಲ್ಲಿ ಯಾವುದೇ ಆಟೋರಿಕ್ಷಾ, ಕ್ಯಾಬ್‌ಗಳಿಗೆ ಡಿಜಿಟಲ್ ಮೀಟರ್ ಅಳವಡಿಸಿಲ್ಲ. ಆದ್ದರಿಂದ ಪರಿಷ್ಕೃತ ದರವನ್ನು ಡಿಜಿಟಲ್ ಫೇರ್ ಮೀಟರ್ ಅಳವಡಿಸುವವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆಟೋರಿಕ್ಷಾಗಳಿಗೆ ಇದ್ದ ಕನಿಷ್ಠ ದರವನ್ನು ಎಂದಿನಂತೆ ಕನಿಷ್ಠ 20 ಮುಂದುವರೆಸಲಾಗಿದ್ದು, ನಗರದಲ್ಲಿ ಆಟೋರಿಕ್ಷಾ ಚಾಲಕರು ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ವಸೂಲಿ ಮಾಡಿದಲ್ಲಿ ಸಾರ್ವಜನಿಕರು, ಪ್ರಯಾಣಿಕರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಲಾಗಿದೆ.
ಎಸ್‌ಬಿಐ ಸಿಡಿಎಂ ಸೇವೆ ಕಾರ್ಯಾರಂಭ
ಚಿಕ್ಕಬಳ್ಳಾಪುರ: ತಮ್ಮ ಬ್ಯಾಂಕಿನ ಖಾತೆಯಲ್ಲಿರುವ ಹಣವನ್ನು ಗ್ರಾಹಕರು ಪಡೆದುಕೊಳ್ಳಲು ಎಟಿಎಂ ಸೇವೆ ಲಭ್ಯವಿದೆ. ಇದೀಗ ಬ್ಯಾಂಕಿನ ತಮ್ಮ ಖಾತೆಗೆ ಹಣವನ್ನು ಸ್ವಯಂ ಗ್ರಾಹಕರೇ ಜಮಾ ಮಾಡಲು ಸಿಡಿಎಂ ಸೇವೆ ಬಂದಿದೆ.
ಸಿಡಿಎಂ ಅಂದರೆ 'ಕ್ಯಾಷ್ ಡಿಪಾಸಿಟ್ ಮಷಿನ್‌'. ಗ್ರಾಹಕರು ಎಟಿಎಂ ನಿಂದ ಹಣವನ್ನು ಪಡೆದುಕೊಳ್ಳುವ ರೀತಿಯಲ್ಲಿಯೇ ಸಿಡಿಎಂ ಮಷಿನ್‌ನಿಂದ ಹಣವನ್ನು ತಮ್ಮ ತಮ್ಮ ಖಾತೆಗೆ ಜಮಾ ಮಾಡಿಕೊಳ್ಳಬಹುದು. ಇದಕ್ಕಾಗಿ ಬ್ಯಾಂಕಿನಿಂದ ನೀಡಲಾಗುವ ವಿಶೇಷ ಕಾರ್ಡುನ್ನು ಪಡೆದುಕೊಳ್ಳಬೇಕು. ಸಿಡಿಎಂನಲ್ಲಿ ಆ ಕಾರ್ಡುನ್ನು ಹಾಕಿ, ವಿವರಗಳನ್ನು ನಮೂದಿಸಿ ನೋಟುಗಳನ್ನು ನಿಗದಿತ ಬಾಕ್ಸ್ ನೊಳಗೆ ಹಾಕಿದರೆ ಸಾಕು, ಹಣ ಜಮಾ ಆಗುತ್ತದೆ. ಯಂತ್ರ ಲೆಕ್ಕವನ್ನು ಹಾಕಿ ಕೊನೆಗೆ ಹಣ ಜಮಾಗೊಂಡ ಮಾಹಿತಿಯ ಚೀಟಿಯನ್ನು ಕೈಗಿಡುತ್ತದೆ.
ಇಂಥ ಬಹು ಉಪಯೋಗಿ ಸೇವೆಯನ್ನು ಚಿಕ್ಕಬಳ್ಳಾಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿದೆ. ಸಿಡಿಎಂ ಯಂತ್ರವನ್ನು ಬ್ಯಾಂಕಿನ ಆವರಣದಲ್ಲಿರುವ ಎಟಿಎಂ ಕೇಂದ್ರದ ಜೊತೆಗೆ ಸ್ಥಾಪಿಸಿದೆ. ಇದರ ಮೂಲಕ ಬ್ಯಾಂಕಿನ ಗ್ರಾಹಕರು ಒಂದು ದಿನಕ್ಕೆ 49900 ಹಣವನ್ನು ಜಮಾ ಮಾಡಲು ಅವಕಾಶವಿದೆ. ಒಂದು ವೇಳೆ ಹಣದ ಬಂಡಲ್‌ನಲ್ಲಿ ನಕಲಿ ನೋಟ್, ಹಾಳಾದ ನೋಟು, ಎಣ್ಣೆಯಿಂದ ಕೂಡಿದ ನೋಟುಗಳು ಸೇರಿದ್ದರೆ ಅವುಗಳನ್ನು ಸಿಡಿಎಂ ಯಂತ್ರ ಹಿಡಿದಿಟ್ಟುಕೊಳ್ಳುತ್ತದೆ. ಅವುಗಳನ್ನು ಬದಲಾಯಿಸಲು ಸೂಚಿಸುತ್ತದೆ. ಅಲ್ಲದೇ ತಪ್ಪು ಮಾಹಿತಿಯನ್ನು ನೀಡಿದರೆ ವ್ಯವಹಾರವನ್ನು ಪೂರ್ಣಗೊಳಿಸುವುದಿಲ್ಲ. ಈಗಾಗಲೇ ವಿದ್ಯುತ್ ಬಿಲ್ ಅನ್ನು ಸಿಡಿಎಂ ಯಂತ್ರದ ಮೂಲಕವೇ ಪಾವತಿ ಮಾಡಲಾಗುತ್ತಿದ್ದು ಇದು ಗ್ರಾಹಕರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.ಆದರೆ,ಅತಿ ಹೆಚ್ಚು ಪ್ರಮಾಣದಲ್ಲಿ ಹಣ ಜಮಾ ಮತ್ತು ವಿತರಣೆ ಮಾಡುವ ಬ್ಯಾಂಕಿಂಗ್ ನಲ್ಲಿ ಇಂತಹ ಸೇವೆ ಲಭ್ಯವಾಗಿರಲಿಲ್ಲ.
ನಕಲಿ ದಾಖಲೆ ಸೃಷ್ಟಿ: ಎಸಿ ಸುಧಾ ಅಮಾನತು
ಕನ್ನಡಪ್ರಭ ವಾರ್ತೆ, ಮಾಲೂರು, ಏ.22
ನಕಲಿ ಭೂ ದಾಖಲೆ ಸೃಷ್ಟಿಸಿದ ಆರೋಪದ ಮೇರೆಗೆ ಈ ಹಿಂದೆ ಮಾಲೂರು ತಹಸೀಲ್ದಾರ್ ಆಗಿದ್ದ ಡಾ.ಸುಧಾ  ಪಾಯಸ್ಸ್ ಹಾಗೂ ಅವರಿಗೆ ಸಹಕಾರ ನೀಡಿದ ಎಸ್‌ಡಿಸಿ ವೆಂಕಟೇಶ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಜಿಲ್ಲಾಧಿಕಾರಿ ಡಿ.ಕೆ.ರವಿ ಆದೇಶಿಸಿದ್ದಾರೆ.
ತಾಲೂಕಿನ ಲಕ್ಕೂರು ಹೋಬಳಿ ಸಂಪಂಗೆರೆ ಗ್ರಾಮದ ಸರ್ಕಾರಿ ಜಮೀನು ಸೇರಿದಂತೆ ತಾಲೂಕಿನ ಹಲವಡೆ ಅಕ್ರಮವಾಗಿ ಭೂ ದಾಖಲೆ ತಿದ್ದಿ ನಕಲಿ ಸೃಷ್ಟಿರುವ ಆಪಾದನೆ ಡಾ.ಸುಧಾ ಅವರ ಮೇಲಿತ್ತು. ಕಳೆದ ಮಾರ್ಚ್‌ನಲ್ಲಿ ಮಾಲೂರಿನಿಂದ ವರ್ಗಾವಣೆಯಾಗಿದ್ದರು.
ತಹಸೀಲ್ದಾರ್ ಡಾ.ಸುಧಾ ಅವರ ಅಕ್ರಮಗಳ ಬಗ್ಗೆ ಹಕ್ಕು ದಾಖಲೆ ಶಿರಸ್ತೆದಾರರು ನೀಡಿರುವ ವರಿದಿಯನ್ನು ಅನ್ವಯಿಸಿ ಜಿಲ್ಲಾಧಿಕಾರಿಗಳು ಅಮಾನತು ಆದೇಶ ಹೊರಡಿಸಿದ್ದಾರೆ. ಅಕ್ರಮ ದಾಖಲೆಗಳ ಮೂಲಕ ಸರ್ಕಾರಿ ಜಮೀನು ಭೂಗಳ್ಳರ ಪಾಲಾಗಲು ಕಾರಣವಾಗಿರುವ ಕಾರಣ ಹಾಗೂ ಕಂದಾಯ ದಾಖಲೆಗಳಲ್ಲಿ ನಮೂದಿಸಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಕರ್ತವ್ಯ ಲೋಪ ಎಸಗಿರುವ ತಹಸೀಲ್ದಾರ್ ಡಾ.ಸುಧಾ ಪಾಯಸ್ಸ್ ಹಾಗೂ ವೆಂಕಟೇಶ್ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಸೂಕ್ತ ಕ್ರಿಮಿನಲ್ ಕೇಸ್ ದಾಖಲಿಸಲು ಹಾಲಿ ತಹಸೀಲ್ದಾರ್ ಶಿವುಕುಮಾರ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ತಹಸೀಲ್ದಾರ್ ಡಾ.ಸುಧಾ ಪಾಯಸ್ಸ್ ರವರನ್ನು ಅಮಾನತ್ತು ಪಡಿಸಿ ಇಲಾಖಾ ವಿಚಾರಣೆ ನಡೆಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಮ್ಮ ಆದೇಶ ಪತ್ರದಲ್ಲಿ ತಿಳಿಸಿರುವ ಜಿಲ್ಲಾಧಿಕಾರಿಗಳು, ವೆಂಕಟೇಶ್ ರವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸುವಂತೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement