ಅದ್ಧೂರಿ ಉಟ್ಲು ಜಾತ್ರೆ ಕಾಯಿ ಒಡೆದವರಿಗೆ ಬಹುಮಾನ
ಗುಡಿಬಂಡೆ: ತಾಲೂಕಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ಕಾಯಿ ಉಟ್ಲು ಜಾತ್ರೆ ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಮುಂದೆ ಎತ್ತರವಾದ ಮರದ ಕಂಬದ ಮೇಲೆ ತಿರುಗುವ ತೊಟ್ಟಿಲನ್ನು ನಿರ್ಮಿಸಿ, ಕೆಲವರು ಅದರಲ್ಲಿ ಕುಳಿತು ಉದ್ದವಾದ ಹಗ್ಗಕ್ಕೆ ತೆಂಗಿನ ಕಾಯಿ ಕಟ್ಟಿ ಜೋರಾಗಿ ತಿರುಗಿಸುವುದು, ಕೆಳಗಿನಿಂದ ಹತ್ತಾರು ಯುವಕರು ಉದ್ದನೆಯ ದೊಣ್ಣೆಗಳನ್ನು ಹಿಡಿದು ಕಾಯಿ ಒಡೆಯಲು ಪ್ರಯತ್ನಿಸುತ್ತಿದ್ದ ದೃಶ್ಯ ನೋಡುಗರಿಗೆ ಮನರಂಜನೆಯಾಗಿತ್ತು. ಕಾಯಿ ಒಡೆದವರಿಗೆ ವಿಶೇಷ ಬಹುಮಾನ ನೀಡಲಾಯಿತು. ಗ್ರಾಮದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ದೇವತಾ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ತಂಬಿಟ್ಟಿನ ದೀಪೋ ತ್ಸವ ಏರ್ಪಡಿಸಲಾಗಿತ್ತು. ಅನ್ನ ಸಂತರ್ಪಣೆ ನಡೆಯಿತು. ಜಂಗಾಲಹಳ್ಳಿ, ಪೋಲಂಪಲ್ಲಿ, ವರ್ಲಕೊಂಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು ಉಟ್ಟು ಪರಿಷೆಯಲ್ಲಿ ಭಾಗವಹಿಸಿದ್ದರು.