ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದೌರ್ಜನ್ಯ ತಡೆಗೆ ಕಾನೂನಿನ ಅರಿವು

Mainashree
Updated On : 24 Apr 2014, 12:07 pm

ಕೋಲಾರ: ಮಹಿಳೆ ರಕ್ಷಣೆಗೆ ಪ್ರಬಲ ಕಾನೂನುಗಳಿದ್ದರೂ ಅರಿವಿನ ಕೊರತೆಯಿಂದಾಗಿ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಮಹಿಳೆಯರು ತಮ್ಮ ಹಕ್ಕುಗಳ ಪ್ರತಿಪಾದನೆಗಾಗಿ ಕಾನೂನು ಅರಿವು ಪಡೆಯಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್. ರೇಣುಕಾಪ್ರಸಾದ್ ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಾಗೃತಿ ಸೇವಾ ಸಂಸ್ಥೆ, ಗೋಕುಲ ವಿದ್ಯಾಸಂಸ್ಥೆ, ಸರ್ಕಾರಿ ಮಹಿಳಾ ಐಟಿಐ ಹಾಗೂ ಪ್ರಗತಿ ಮಹಿಳಾ ಅಭಿವೃದ್ಧಿ ಸಂಘಗಳ ಸಂಯುಕ್ತಾಶ್ರಯದಲ್ಲಿ ನಗರದ ಮಹಿಳಾ ಐಟಿಐನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ರಥ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ತಡೆಗೆ ಮತ್ತು ಈ ಕುರಿತು ಜಾಗೃತಿ ಮೂಡಿಸಲೆಂದೇ ಕಾನೂನಿನ ಅರಿವು, ನೆರವು ಒದಗಿಸಲು ಪ್ರಾಧಿಕಾರ ರಚನೆ ಆಗಿದ್ದು ಮಹಿಳೆಯರು ಉಚಿತವಾಗಿ ಸಿಗುವ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸುಪ್ರೀಂಕೋರ್ಟ್ ದುಡಿಯುವ ಜಾಗದಲ್ಲಿ ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಆ ಸಂಸ್ಥೆಯ ಮಾಲೀಕರೇ ಹೊಣೆ ಎಂದು ತೀರ್ಪು ನೀಡಿದೆ, ಆದರೂ ಇಂದಿಗೂ ದುಡಿಯುವ ಕ್ಷೇತ್ರಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳನ್ನು ಕಾಣುತ್ತಲೇ ಇದ್ದೇವೆ ಎಂದು ವಿಷಾದಿಸಿದರು.
2013 ರಲ್ಲಿ ದೆಹಲಿ ನಿರ್ಭಯ ಅತ್ಯಾಚಾರ ಪ್ರಕರಣದ ನಂತರ ಸರ್ಕಾರ ಮಹಿಳಾ ದೌರ್ಜನ್ಯ ತಡೆಗೆ ಕಠಿಣ ಕಾನೂನು ಜಾರಿಗೆ ತಂದಿದೆ ಎಂದ ಅವರು, ಇದರ ಅರಿವು ಪ್ರತಿಯೊಬ್ಬರಿಗೂ ಮುಟ್ಟಬೇಕೆಂಬ ಉದ್ದೇಶದಿಂದ ಕಾನೂನು ಸಾಕ್ಷರತಾ ರಥದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಕಿಣಿಕೇರಿ, ಪ್ರತಿಯೊಬ್ಬರನ್ನು ತಪ್ಪು ಮಾಡದಂತೆ ಎಚ್ಚರಿಸುವುದೇ ಕಾನೂನಾಗಿದೆ ಎಂದರು. ಹೆಣ್ಣು ಭ್ರೂಣ ಹತ್ಯೆಯಿಂದಾಗಿ ಸಮಾಜದಲ್ಲಿ ಆಗುತ್ತಿರುವ ಹೆಣ್ಣು-ಗಂಡಿನ ಅನುಪಾತದಲ್ಲಿನ ವ್ಯತ್ಯಾಸ, ಅಸಮತೋಲನದ ಕುರಿತು ಅವರು ಮಾತನಾಡಿದರು. ಈ ಅನುಪಾತ ವ್ಯತ್ಯಾಸವಾಗುತ್ತಾ ಹೋದಲ್ಲಿ ಮುಂದಿನ ದಿನಗಳಲ್ಲಿ ಮಹಾಭಾರತದಲ್ಲಿ ದ್ರೌಪದಿ ಪಾತ್ರ ನೆನಪಿಗೆ ಬರಬಹುದು ಎಂದು ಎಚ್ಚರಿಸಿದರು.
ಹೆಣ್ಣು ಭ್ರೂಣ ಹತ್ಯೆಯಿಂದಾಗಿ ಹೆಣ್ಣುಗಳ ಕೊರತೆಯಾಗಿ ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳ ಅಪಹರಣ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯರು ಭ್ರೂಣ ಹತ್ಯೆಯನ್ನು ವಿರೋಧಿಸಬೇಕು,ಅಂತಹ ಘಟನೆಗಳು ಕಂಡು ಬಂದರೆ ದೂರು ನೀಡಿ ಎಂದು ಸಲಹೆ ನೀಡಿದರು. ಜಾಗೃತಿ ಸೇವಾ ಸಂಸ್ಥೆಯ ಅಧ್ಯಕ್ಷ ಕೆ.ಆರ್. ಧನರಾಜ್, ದೈನಂದಿನ ಬದುಕಿಗೆ ಕಾನೂನಿನ ಅಗತ್ಯತೆ, ಮಹಿಳೆ ದೌರ್ಜನ್ಯ ತಡೆಯಲು ಅನುಸರಿಸಬೇಕಾದ ಕಾನೂನಿನ ಅಂಶಗಳ ಮಾಯಹಿತಿ ನೀಡಿದರು.
ಸಂವಿಧಾನಾತ್ಮಕ ಮೂಲ ಕರ್ತವ್ಯಗಳ ಕುರಿತು ವಕೀಲ ಕೆ.ವಿ. ಸುರೇಂದ್ರಕುಮಾರ್ ಮಾತನಾಡಿ, ನಾವು ಹಕ್ಕುಗಳನ್ನು ಮಾತ್ರ ಕೇಳುತ್ತೇವೆ ಆದರೆ ಕರ್ತವ್ಯಗಳನ್ನು ಮರೆಯುತ್ತಿದ್ದೇವೆ ಎಂದು ವಿಷಾದಿಸಿ, ಹಕ್ಕಿನೊಂದಿಗೆ ಕರ್ತವ್ಯವನ್ನು ಪಾಲಿಸಿದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯವೆಂದರು.
ಮಹಿಳೆ ಮತ್ತು ಕಾನೂನುಗಳ ಬಗ್ಗೆ ವಕೀಲ ಜಿ. ಗಣೇಶ್ ಉಪನ್ಯಾಸ ನೀಡಿದರು. ನ್ಯಾಯಾಧೀಶರಾದ ಕೆಂಗಬಾಲಯ್ಯ, ಜಿ. ಕುಮಾರ್, ಚಿನ್ನಸ್ವಾಮಿ, ಕೆ.ಜಿ. ಚಿಂತಾ, ವಕೀಲರ ಸಂಘದ ಕಾರ್ಯದರ್ಶಿ  ಸತೀಶ್, ಐಟಿಐ ಬೋಧಕ ಸಿಬ್ಬಂದಿ ಎನ್. ಚಿನ್ನಪ್ಪ ಇದ್ದರು. ಮಹಿಳಾ ಐಟಿಐನ ಶಿವಕುಮಾರ್ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement