ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೀರು ದೂರು ಬಂದ್ರೆ ಕ್ರಮ ಜರೂರು

Mainashree
Updated On : 24 Apr 2014, 12:07 pm

ಕನ್ನಡಪ್ರಭ ವಾರ್ತೆ, ಕೋಲಾರ, ಏ.23
ಕುಡಿಯುವ ನೀರಿನ ಪೂರೈಕೆ ವಿಚಾರದಲ್ಲಿ ಯಾವುದೇ ಲೋಪ ಉಂಟಾಗದಂತೆ ಎಚ್ಚರವಹಿಸಿ ಕೆಲಸ ಮಾಡಬೇಕೆಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನೋತ್‌ಪ್ರಿಯಾ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಅವರು ಗ್ರಾಪಂ ಪಿಡಿಒಗಳನ್ನು ಉದ್ದೇಶಿಸಿ ಮಾತನಾಡಿ, ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ.ಸರ್ಕಾರ ಕಳೆದ ಏಪ್ರಿಲ್ 10ರಂದೇ 2014-15ನೇ ಸಾಲಿನ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಡಬೇಕೆಂದು ಸುತ್ತೂಲೆ ಕಳುಹಿಸಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಕ್ರಿಯಾ ಯೋಜನೆ ತಯಾರಿಸಲು ವಿಳಂಬವಾಗಿರುವುದರಿಂದ ಈಗಲಾದರೂ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಹೇಳಿದರು. ಜಿಲ್ಲೆಯ ಐದು ತಾಲೂಕುಗಳ 156 ಗ್ರಾಪಂಗಳ ವ್ಯಾಪ್ತಿಯ 87 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, 64 ಕಡೆ ಟ್ಯಾಂಕರ್‌ಗಳ ಮೂಲಕ ಹಾಗೂ 23 ಕಡೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಒದಗಿಸಲಾಗುತ್ತಿದೆ. ಬೇಸಿಗೆ ಹೆಚ್ಚಾಗುತ್ತಿರುವುದರಿಂದ ನೀರಿನ ಕೊರತೆ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಜಿಲ್ಲೆಯ ಒಟ್ಟು 156 ಗ್ರಾಪಂಗಳ ವ್ಯಾಪ್ತಿಯಲ್ಲಿ 1598 ಜನವಸತಿ ಗ್ರಾಮಗಳು ಇವೆ. ಲಭ್ಯವಿರುವ ಅಂತರ್ಜಲವನ್ನು ಹಳ್ಳಿಗಳಿಗೆ ಒದಗಿಸಲಾಗುತ್ತಿದೆ. ಕೋಲಾರ ತಾಲೂಕಿನ 29, ಮಾಲೂರು, ಶ್ರೀನಿವಾಸಪುರದ ತಲಾ 10, ಬಂಗಾರಪೇಟೆ ಮತ್ತು ಮುಳಬಾಗಿಲಿನ ತಲಾ 19 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಗಂಭೀರ ಸಮಸ್ಯೆ ಎದುರಾಗಿದ್ದು ಸರ್ಕಾರದ ಮಾರ್ಗಸೂಚಿಯ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಅನಗತ್ಯವಾಗಿ ಕೊಳವೆ ಬಾವಿಗಳನ್ನು ಕೊರೆಸಬೇಡಿ. ಎಲ್ಲಿ ಸಮಸ್ಯೆ ಇದೆಯೋ ಆ ಗ್ರಾಮಕ್ಕೆ ಭೂವಿಜ್ಞಾನಿಗಳನ್ನು ಕರೆದುಕೊಂಡು ಹೋಗಿ ಪರಿಶೀಲನೆ ನಂತರ ನೀರಿನ ಲಭ್ಯತೆ ಆಧರಿಸಿ ಕ್ರಮ ಜರುಗಿಸಿ. ಹೊಸ ಕೊಳವೆ ಬಾವಿಗಳಿಗೆ ಹಣದ ಕೊರತೆ ಇಲ್ಲ. ಕಾಮಗಾರಿಯ ವರದಿ ಹಾಗೂ ಖರ್ಚಿನ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿದಲ್ಲಿ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಕುಡಿಯುವ ನೀರಿನ ವಿಚಾರದಲ್ಲಿ ಯಾರಾದರೂ ಉದಾಸೀನ ತೋರಿದರೆ ಷೋಕಾಸ್ ನೊಟೀಸ್ ಜಾರಿ ಮಾಡಿ,  ಶಿಸ್ತು ಕ್ರಮ ಕೈಗೊಳ್ಳುತ್ತೇನೆ. ಇದಕ್ಕೆ ಅವಕಾಶ ನೀಡದೆ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ ಎಂದು ಸೂಚ್ಯವಾಗಿ ತಿಳಿಸಿದರು.
ಕ್ರಿಯಾ ಯೋಜನೆ ವಿಳಂಬ ಬೇಡ, ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಿರುವ ಬಾಬ್ತಿನ ಲೆಕ್ಕ ಪಕ್ಕಾ ಆಗಿದ್ದಲ್ಲಿ ತಕ್ಷಣ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತೇನೆ. ಯಾವುದೇ ಹಳ್ಳಿಗಳಿಂದ ನೀರಿನ ವಿಚಾರದಲ್ಲಿ ದೂರು ಕೇಳಿ ಬಂದರೆ ತಕ್ಷಣ ಸ್ಪಂದಿಸಿ ಸಮಸ್ಯೆ ನಿವಾರಣೆ ಮಾಡಬೇಕು. ಚುನಾವಣೆ ಮುಗಿದಿರುವುದರಿಂದ ಇನ್ನು ಜಿಲ್ಲೆಯ ಅಭಿವೃದ್ಧಿ ಕಡೆ ಎಲ್ಲರೂ ಗಮನ ನೀಡೋಣವೆಂದು ಸಲಹೆ ನೀಡಿದರು.
ರಾಜ್ಯ ಸರ್ಕಾರ ಜಿಲ್ಲೆಯ ಎಲ್ಲಾ ಐದು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ನರೇಗಾ ಯೋಜನೆಯಡಿ ಬಡವರಿಗೆ ಕಾಮಗಾರಿಗಳನ್ನು ನೀಡಬೇಕು. ಆನ್‌ಲೈನ್ ಮೂಲಕ ಕಾಲ ಕಾಲಕ್ಕೆ ವರದಿ ನೀಡಿದಲ್ಲಿ ಹಣ ಬಿಡುಗಡೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ಸಭೆಯಲ್ಲಿ ಗ್ರಾಪಂ ಪಿಡಿಒಗಳು ಮಾತ್ರವಲ್ಲದೆ ಎಲ್ಲಾ ತಾಪಂಗಳ ಇಒಗಳು ಹಾಜರಿದ್ದರು. ಜಿಪಂ ಉಪ ಕಾರ್ಯದರ್ಶಿ ಬದನೂರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement