'ಬಂಗಾರ'ಪೇಟೆ ಕಸಮಯ!
ಬಂಗಾರಪೇಟೆ: ಪಟ್ಟಣವನ್ನು ಸುಂದರಗೊಳಿಸುವ ಪುರಸಭೆ ಪ್ರಯತ್ನಕ್ಕೆ ಕಸ ಅಡ್ಡಿಯಾಗಿದೆ!
ಪಟ್ಟಣದ ಕೆಲವು ರಸ್ತೆ, ಚರಂಡಿ, ಖಾಲಿ ನಿವೇಶನವೇ ಕಸದ ತೊಟ್ಟಿಗಳಾಗಿವೆ. ಸಿ.ರಹೀಂ ಬಡಾವಣೆ, ದಂಡು ರಸ್ತೆಯ ಕೆಲವೆಡೆ, ಬೂದಿಕೋಟೆ ಮುಖ್ಯರಸ್ತೆ, ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆ ಅಂಚಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ.
ಪುರಸಭೆಗೆ ಹೊಸದಾಗಿ ಸೇರ್ಪಡೆಯಾದ ದಿಢೀರ್ ನಗರ, ಕುಂಬಾರ ಪಾಳ್ಯದ ಕೆಲವು ಭಾಗ, ಇಂದಿರಾ ಆಶ್ರಯ, ಕೆರೆಕೋಡಿ ಇತರೆ ಬಡಾವಣೆಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ತೆ ಇಲ್ಲದೆ ಹದಗೆಟ್ಟಿವೆ. ಅಲ್ಲಿನ ಕೆಲ ಚರಂಡಿಗಳು ಕಸ, ಮಣ್ಣಿನಿಂದ ಮುಚ್ಚಿಹೋಗಿವೆ. ಕೆಲವೆಡೆ ಕಸ ವಿಲೇವಾರಿ ಮಾಡುತ್ತಿಲ್ಲ ಎನ್ನುವುದು ಅಲ್ಲಿನ ನಿವಾಸಿಗಳು ದೂರು. ಕುಂಬಾರಪಾಳ್ಯ, ಶ್ಯಾಮಸುಂದರ್ ಇಂಡಸ್ಟ್ರಿಯಲ್ ವೆಸಿನಿಟಿ ಬಡಾವಣೆ, ದಿಢೀರ್ ನಗರದ ಕೆಲವಡೆ ಮುಳ್ಳು ಗಿಡ ಗಂಟಿಗಳು ಬೆಳೆದು ಹಾವುಗಳ ಕಾಟ ಹೆಚ್ಚಾಗಿದೆ ಎಂದು ನಾಗರಿಕರು ದೂರಿದ್ದಾರೆ.
ಕ್ರಮ ಕೈಗೊಳ್ಳಿ: ವಾರ್ಡ್‌ಗಳಲ್ಲಿ ಸೂಕ್ತ ಸ್ಥಳಗಳಲ್ಲಿ ಹೆಚ್ಚುವರಿ ಕಂಟೈನರ್ ಇಡಬೇಕು. ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬಳಕೆ ತಡೆಗಟ್ಟಬೇಕು. ಕೊಳಚೆ ಪ್ರದೇಶದ ನಿವಾಸಿಗಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿ ಪರಿಸರ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ಮುನಿಯಮ್ಮ ಬಡಾವಣೆಯ ಶಿವಕುಮಾರ್ ಅವರ ಒತ್ತಾಯ.