ವೈದ್ಯರ ನಿರ್ಲಕ್ಷ್ಯ: ಕಾಶ್ಮೀರಿ ಮೇಕೆ ಸಾವು
ಕೋಲಾರ: ತಾಲೂಕಿನ ಸುಗಟೂರು ಗ್ರಾಮದಲ್ಲಿ ಪಶು ವೈದ್ಯರ ನಿರ್ಲಕ್ಷ್ಯದಿಂದ 25 ಸಾವಿರ ರು. ಮೌಲ್ಯದ ಕಾಶ್ಮೀರಿ ಪುರಿ ಎಂಬ ತಳಿಯ ಮೇಕೆ ಮರಿ ಸತ್ತಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪಶು ಸಂಗೋಪನಾ ಇಲಾಖೆಯ ಮುಂದೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಎರಡು ತಿಂಗಳ ಕಾಶ್ಮೀರಿ ಪುರಿ ಮೇಕೆ ಮರಿಯು ಸರಿಯಾಗಿ ತಾಯಿಯ ಹಾಲು ಕುಡಿಯುತ್ತಿರಲಿಲ್ಲ, ಸುಗಟೂರು ಗ್ರಾಮದಲ್ಲಿನ ಪಶು ವೈದ್ಯರ ಬಳಿ ಮೇಕೆ ಮರಿಯನ್ನು ತಪಾಸಣೆಗೆ ತೆಗೆದುಕೊಂಡು ಹೋದಾಗ, ಯಾವುದೇ ಪರೀಕ್ಷೆ ಇಲ್ಲದೆ ಔಷದಿ ನೀಡಿರುವುದರಿಂದ ಮೇಕೆ ಮರಿ ಸತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಕೋಲಾರ ಜಿಲ್ಲಾ ಕೇಂದ್ರದಲ್ಲಿ ಪಶುಗಳಿಗೆ ಏನಾದರೂ ಗಂಭೀರ ಕಾಯಿಲೆಗಳು ಕಾಣಿಸಿಕೊಂಡರೆ ರಕ್ತ ಪರೀಕ್ಷೆ,ಮೂತ್ರ ಪರೀಕ್ಷೆ ಮಾಡಲು ಸರಿಯಾದ ಪ್ರಯೋಗಾಲಯವಿಲ್ಲ, ಜಾನುವಾರುಗಳಿಗೆ ಸ್ಕ್ಯಾನಿಂಗ್ ಹಾಗೂ ಎಕ್ಸರೇ ಮಾಡಿಸಲು ಘಟಕಗಳಿಲ್ಲವೆಂದು ಪ್ರತಿಭಟನಾಕಾರರು ದೂರಿದರಲ್ಲದೆ, ವೈದ್ಯರ ತಪ್ಪಿನಿಂದ ನಷ್ಟ ಅನುಭವಿಸಿರುವ ರೈತನಿಗೆ ಪರಿಹಾರ ನೀಡಬೇಕು, ಕೂಡಲೇ ಜಾನುವಾರುಗಳ ರಕ್ತ, ಮೂತ್ರ ಪರೀಕ್ಷೆಗಾಗಿ ಸುಸಜ್ಜಿತವಾದ ಪ್ರಾಯೋಗಾಲಯ, ಸ್ಕ್ಯಾನಿಂಗ್ ಸೆಂಟರ್,ಎಕ್ಸರೇ ಯೂನಿಟ್ ಹಾಗೂ ಶಸ್ತ್ರಚಿಕಿತ್ಸಾ ಘಟಕವನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.
ಪಶು ಸಂಗೋಪನಾ ಇಲಾಖೆಯ ಮುಂದೆ ಕೆಲ ನಿಮಿಷಗಳ ಕಾಲ ಸತ್ತ ಮೇಕೆ ಮರಿಯೊಂದಿಗೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಅಧಿಕಾರಿಗಳು ಮೇಕೆ ಮರಿಯ ಶವ ಪರೀಕ್ಷೆ ನಡೆಸಿದ ಬಳಿಕ ಸಾವಿಗೆ ಖಚಿತ ಕಾರಣ ತಿಳಿಯಬಹುದಾಗಿದೆ. ಬೆಂಗಳೂರಿನ ಹೆಬ್ಬಾಳಕ್ಕೆ ಮೇಕೆ ಮರಿಯ ಕರಳು ಹಾಗೂ ದೇಹದ ಇನ್ನಿತರ ಭಾಗಗಳನ್ನು ಕಳುಹಿಸಿಕೊಡುವುದಾಗಿ ಹೇಳಿದರು.
ಇದಕ್ಕೆ ಒಪ್ಪದ ಗ್ರಾಮಸ್ಥರು, ಬೆಂಗಳೂರಿನಿಂದ ತಜ್ಞ ಪಶು ವೈದ್ಯರನ್ನು ಕೋಲಾರಕ್ಕೆ ಕಳುಹಿಸಿ ಶವ ಪರೀಕ್ಷೆ ಇಲ್ಲಯೇ ಮಾಡಿಸಿ ಎಂದು ಪಟ್ಟು ಹಿಡಿದರು. ಅಧಿಕಾರಿಗಳು ಇವರ ಬೇಡಿಕೆ ಈಡೇರಿಸುವುದಕ್ಕೆ ಅಸಹಾಯಕತೆ ವ್ಯಕ್ತಪಡಿಸಿದ್ದರಿಂದ ಗ್ರಾಮಸ್ಥರು ಸತ್ತ ಮೇಕೆ ಮರಿಯ ಶವದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ ಸಮಸ್ಯೆಗೆ ಸ್ಪಂದಿಸುವಂತೆ ಕೋರಿದರು.
ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ನವೀನ್‌ಕುಮಾರ್ ಮನವಿ ಸ್ವೀಕರಿಸಿದರು. ರೈತರಾದ ಎ. ಮುರಳಿಧರ್, ಎಸ್.ಡಿ. ಮಂಜುನಾಥ್, ಸಿದ್ದೇಗೌಡ, ನಾರಾಯಣಪ್ಪ, ರಘುನಾಥ್, ವೆಂಕಟಸ್ವಾಮಿ, ಎಸ್.ಎನ್. ರಾಜಶೇಖರ್, ರಘುನಾಥ್, ರಾಮಣ್ಣ, ವೆಂಕಟೇಶಪ್ಪ ಇನ್ನಿತರರು ಇದ್ದರು.