ಕೃಷ್ಣಪ್ಪಗೆ ಭಾವಪೂರ್ಣ ಶ್ರದ್ಧಾಂಜಲಿ
ಚಿಕ್ಕಬಳ್ಳಾಪುರ: ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಚಿವ ಎ. ಕೃಷ್ಣಪ್ಪ ನಿಧನ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಎ. ಕೃಷ್ಣಪ್ಪನವರ ಭಾವ ಚಿತ್ರಕ್ಕೆ ಜೆಡಿಎಸ್ ಜಿಲ್ಲಾ ಘಟಕದ ಮುಖಂಡರು ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಕಾಲ ಮೌನ ವಹಿಸುವ ಮೂಲಕ ಸಂತಾಪ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪನವರನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ದೇವೆಗೌಡರು ಆಯ್ಕೆ ಮಾಡಿದ್ದರು. ಎ. ಕೃಷ್ಣಪ್ಪ ನವರು ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ ಹೆಚ್ಚು ಒತ್ತು ನೀಡಿದ್ದರು. ಪಕ್ಷ ಸಂಘಟನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಅವರ ಗೆಲವು ನಿಶ್ಚಿತವಾಗಿತ್ತು. ದುರದೃಷ್ಟವಶಾತ್ ಫಲಿತಾಂಶಕ್ಕೂ ಮುನ್ನವೆ ನಿಧನ ಹೊಂದಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್ ಮಾತನಾಡಿ, ಎ. ಕೃಷ್ಣಪ್ಪ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರಲ್ಲಿ ಅಘಾತ ಉಂಟಾಯಿತು. ಕೃಷ್ಣಪ್ಪ ಅವರು ಉತ್ತಮ ಆರೋಗ್ಯದಿಂದ ಇದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಎ. ಕೃಷ್ಣಪ್ಪನವರು ಹಿಂದುಳಿದ ನಾಯಕರಾಗಿದ್ದರು. ನೇರ ನುಡಿಯಾಗಿ ಮಾತನಾಡುತ್ತಿದ್ದರು. ಅಂತಹ ಉತ್ತಮ ನಾಯಕನ ಸಾವಿನಿಂದ ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಜಿ.ಆರ್. ನಾರಾಯಣಸ್ವಾಮಿ, ಚದಲುಪುರ ನಾರಾಯಣಸ್ವಾಮಿ, ಕೆ.ಟಿ. ನಾರಾಯಣಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ತಾ.ಪಂ. ಅಧ್ಯಕ್ಷ ಕೃಷ್ಣಮೂರ್ತಿ, ಮಾಜಿ ಅಧ್ಯಕ್ಷ ವೆಂಕಟನಾರಾಯಣಪ್ಪ, ತಾ.ಪಂ. ಸದಸ್ಯ ಪಿ.ಎ. ಮೋಹನ್, ಒಬಳೇಶಪ್ಪ, ನಗರಸಭಾ ಸದಸ್ಯರಾದ ಕಿಸಾನ್ ಕೃಷ್ಣಪ್ಪ, ಭಾರತೀದೇವಿ, ಪಿ.ಶ್ರೀನಿವಾಸ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.