ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತಾಯ್ತನಕ್ಕೆ ಮನ್ನಣೆ: 2 ವರ್ಷ ವೇತನ ಸಹಿತ ರಜೆ

Mainashree
Updated On : 25 Apr 2014, 12:10 pm

ಕನ್ನಡಪ್ರಭ ವಾರ್ತೆ, ಕೋಲಾರ, ಏ.24
ತಾಯ್ತನಕ್ಕೆ ಮನ್ನಣೆ ನೀಡುವ ಸಲುವಾಗಿ ಸುಪ್ರೀಂ ಕೋರ್ಟ್ ಮಗು ಸಾಕಲು ತಾಯಿಗೆ 2 ವರ್ಷಗಳ ವೇತನ ಸಹಿತ ರಜೆ ನೀಡಲು ಸರ್ಕಾರಗಳಿಗೆ ನಿರ್ದೇಶನ ನೀಡಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್. ರೇಣುಕಾಪ್ರಸಾದ್ ತಿಳಿಸಿದರು.
ನಗರದ ನಂದ ಗೋಕುಲ ಸ್ನಾತಕೋತ್ತರ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಾಗೃತಿ ಸೇವಾ ಸಂಸ್ಥೆ ಗೋಕುಲ ವಿದ್ಯಾಸಂಸ್ಥೆ ಹಾಗೂ ಪ್ರಗತಿ ಮಹಿಳಾ ಅಭಿವೃದ್ಧಿ ಸಂಘಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಕಾನೂನು ಸಾಕ್ಷರತಾ ರಥ, ಜನತಾ ಪ್ರವಾಸದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ಹಾಗೂ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸುಪ್ರೀಂ ಚರಿತ್ರಾರ್ಹ ತೀರ್ಪು: ಮಹಿಳಾ ದೌರ್ಜನ್ಯದ ವಿರುದ್ಧ ಸರ್ಕಾರ ಪ್ರಬಲ ಕಾನೂನು ರೂಪಿಸಿದೆ, ಹಾಗೆಯೇ ಮದುವೆಯಾಗದಿದ್ದರೂ ಮಗುವಾಗಿದ್ದಲ್ಲಿ ಅಂತಹ ದಾಂಪತ್ಯವನ್ನು ಸಹ ಮಾನ್ಯ ಮಾಡಿ ಸುಪ್ರೀಂಕೋರ್ಟ್ ಚರಿತಾರ್ಹ ತೀರ್ಪು ನೀಡಿದೆ ಎಂದರು.
ಹೆಂಡತಿ, ಮಕ್ಕಳಿಗೆ ಜೀವನಾಂಶ ಪಡೆಯುವ ಹಕ್ಕನ್ನು ನೀಡಿದ್ದು, ಬದಲಾದ ಜೀವನ ಶೈಲಿಗೆ ಅನುಗುಣವಾಗಿ ಮಹಿಳೆಯ ರಕ್ಷಣೆಗೆ ಸರ್ಕಾರವೂ ಪ್ರಬಲ ಕಾನೂನು ತರುವಂತಾಗಲು ಇದರಿಂದ ಸಹಾಯವಾಗಿದೆ ಎಂದು ಹೇಳಿದರು.
ಸಮಾಜದಲ್ಲಿ ಸ್ವಾಭಿಮಾನಿಯಾಗಿ ಬದುಕಲು ಕಾನೂನಿನ ಅರಿವು ಮತ್ತು ಪಾಲನೆ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಕಾನೂನನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಕಿಣಿಕೇರಿ, ಕುಟುಂಬಗಳಲ್ಲಿ ನಡೆಯುವ ದೌರ್ಜನ್ಯದಿಂದಾಗಿ ಶೋಷಿತ ಮಹಿಳೆಗೆ ಕಾನೂನಿನ ಅರಿವು ಮೂಡಿಸಿ ಎದ್ದು ನಿಲ್ಲಲು ಸಹಕರಿಸುವುದೇ ಈ ಅರಿವು ಕಾರ್ಯಕ್ರಮದ ಉದ್ಧೇಶ ಎಂದರು.
ಅಧ್ಯಕ್ಷತೆ ವಹಿಸಿದ್ದ ಗೋಕುಲ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ವಿ. ನಾರಾಯಣಸ್ವಾಮಿ, ಶಿಕ್ಷಣ ಬದುಕನ್ನು ಕಟ್ಟಿಕೊಟ್ಟರೂ, ಸಮಾಜದಲ್ಲಿ ಬದುಕು ಸಾಗಿಸಲು ಕಾನೂನಿನ ಅರಿವು ಅಗತ್ಯ ಎಂದು ತಿಳಿಸಿದರು. ವಿದ್ಯಾರ್ಥಿಗಳು ಮೊದಲು ಕಾನೂನನ್ನು ಗೌರವಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು, ಇತರೆ ಶೋಷಿತರಿಗೂ ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡಬೇಕೆಂದರು.
ಜಾಗೃತಿ ಸೇವಾ ಸಂಸ್ಥೆಯ ಅಧ್ಯಕ್ಷ ಕೆ.ಆರ್. ಧನರಾಜ್, ಕಾರ್ಮಿಕ ಅಧಿಕಾರಿ ರಾಜಗೋಪಾಲ್,ನ್ಯಾಯಾಧೀಶರಾದ ಕೆಂಗಬಾಲಯ್ಯ, ಮನಗೋಳಿ ಪ್ರೇಮಾವತಿ ಮಲ್ಲಿಕಾರ್ಜುನ, ಜಿ.ಕುಮಾರ್, ಚಿನ್ನಸ್ವಾಮಿ, ಕೆ.ಜಿ. ಚಿಂತಾ, ಶಕುಂತಲಾ, ಮಾಜಿ ನಗರಸಭಾ ಸದಸ್ಯೆ ಯಶೋದಮ್ಮ ನಾರಾಯಣಸ್ವಾಮಿ, ವಕೀಲರ ಸಂಘದ ಕಾರ್ಯದರ್ಶಿ ಸತೀಶ್, ಗೋಕುಲ ಪಿಜಿ ಸೆಂಟರ್‌ನ ಪ್ರಭಾರ ನಿರ್ದೇಶಕಿ ಸುಮಂಗಲಿ, ಕಾರ್ಮಿಕ ನಿರೀಕ್ಷಕ ವಿಜಯಕುಮಾರ್, ರಾಮಕೃಷ್ಣಪ್ಪ ಇದ್ದರು.ಪ್ರಾಂಶುಪಾಲರಾದ ಜಯಂತಿ ಸ್ವಾಗತಿಸಿ,ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement