ಪೋಷಕರೇ ಕ್ರೀಡಾಭಿರುಚಿ ಬೆಳೆಸಲು ಮುಂದಾಗಿ
ಕೋಲಾರ: ಮಕ್ಕಳಲ್ಲಿ ಕ್ರೀಡಾಭಿರುಚಿ ಬೆಳೆಯಲು ಪೋಷಕರು ಸಹಕರಿಸಬೇಕು, ಬೇಸಿಗೆ ಶಿಬಿರಗಳಿಗೆ ಮಕ್ಕಳನ್ನು ಕಳುಹಿಸುವ ಮೂಲಕ ಅವರಲ್ಲಿ ಕ್ರೀಡಾಸಕ್ತಿ ಹೆಚ್ಚಿಸಬೇಕೆಂದು ಕ್ರೀಡಾಪಟು ಹಾಗೂ ಪತ್ರಕರ್ತರ ಸಂಘದ ಕಾರ್ಯದರ್ಶಿ ಎ.ಜಿ. ಸುರೇಶ್‌ಕುಮಾರ್ ಮನವಿ ಮಾಡಿದರು.
ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಮತ್ತು ತಾಲೂಕು ದೈಹಿಕ ಶಿಕ್ಷಕರ ಸಂಘದಿಂದ ನಡೆಸುತ್ತಿರುವ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಚಿಣ್ಣರಿಗೆ ತಮ್ಮ ನಾವಿದ್ದೇವೆ, ಸ್ನೇಹಿತರ ಬಳಗದಿಂದ ಬಿಸ್ಕೆಟ್, ಹಣ್ಣು ವಿತರಿಸಿ ಅವರು ಮಾತನಾಡುತ್ತಿದ್ದರು.
ಕ್ರೀಡೆಗಳಿಂದ ಆರೋಗ್ಯ ವೃದ್ಧಿ ಜತೆಗೆ ಮಕ್ಕಳ ಮಾನಸಿಕ ಬೆಳವಣಿಗೆಗೂ ಸಹಕಾರಿಯಾಗುತ್ತದೆ, ಶೈಕ್ಷಣಿಕವಾಗಿಯೂ ಅವರು ಲವಲವಿಕೆಯಿಂದ ಸಾಧನೆಯತ್ತ ಸಾಗಲು ಸಹಕಾರಿಯಾಗುತ್ತದೆ ಎಂದರು. ನಮ್ಮ ತಂಡದಲ್ಲಿ ಹಲವಾರು ಯುವಕರಿದ್ದು, ನಾವು ಯಾರಿಂದಲೂ ಹಣ ಪಡೆಯದೇ ಸ್ವಂತ ಹಣವನ್ನು ಕ್ರೋಢೀಕರಿಸಿ ನಮ್ಮ ಕೈಲಾದಷ್ಟು ಪ್ರಮಾಣದಲ್ಲಿ ಮಕ್ಕಳ ನೆರವಿಗೆ ಧಾವಿಸಲು ಬಳಗ ಹುಟ್ಟು ಹಾಕಿರುವುದಾಗಿ ತಿಳಿಸಿದರು.
ದೈಹಿಕ ಶಿಕ್ಷಕರ ಸಂಘ ಹಮ್ಮಿಕೊಂಡಿರುವ ಈ ಉಚಿತ ಬೇಸಿಗೆ ಶಿಬಿರ ಜಿಲ್ಲೆಗೆ ಉತ್ತಮ ಕ್ರೀಡಾಪಟುಗಳನ್ನು ಒದಗಿಸುವಂತಾಗಲಿ, ಮತ್ತಷ್ಟು ಮಕ್ಕಳು ಇಂತಹ ಶಿಬಿರದಲ್ಲಿ ಪಾಲ್ಗೊಳ್ಳಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ನಾವಿದ್ದೇವೆ ಸ್ನೇಹಿತರ ಬಳಗದ ಶಿವು, ಕೃಷ್ಣ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಚಿಲಕಾಂತಮಠ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ಆರ್. ನಾಗರಾಜ್, ಮಂಜುನಾಥ್, ಜಿಲ್ಲಾ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಮುರಳಿಮೋಹನ್, ನೌಕರರ ಸಂಘದ ಉಪಾಧ್ಯಕ್ಷ ಖಾದರ್ ಇಲಾಹಿ, ದೈಹಿಕ ತರಬೇತುದಾರರಾದ ಪ್ಲೂಡರ್ ಬೈಲೋ, ಲೀಲಾ, ನಾರಾಯಣಸ್ವಾಮಿ, ತುಳಸಿ ಪ್ರಸಾದ್ ಇದ್ದರು.