ಬೇತಮಂಗಲ ಗ್ರಾಪಂ ಅಧ್ಯಕ್ಷೆಯಾಗಿ ಗೋವಿಂದಮ್ಮ ಅವಿರೋಧ ಆಯ್ಕೆ
ಕೆಜಿಎಫ್: ಬೇತಮಂಗಲ ಗ್ರಾಪಂ ಅಧ್ಯಕ್ಷೆಯಾಗಿ ಗೋವಿಂದಮ್ಮ ಅವರನ್ನು ಕಾಂಗ್ರೆಸ್ ಹಾಗೂ ಬಿಜೆಪಿಯ 17 ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿದರು. ಉಪಾಧ್ಯಕ್ಷೆಯಾಗಿ ಪ್ರೇಮಾವತಿ ಅವರನ್ನು ಮುಂದುವರಿಸಲಾಗಿದೆ.
ಈ ಹಿಂದೆ ಇದ್ದ ಗ್ರಾಪಂ ಅಧ್ಯಕ್ಷೆ ರಾಧಮ್ಮ ವಿರುದ್ಧ 20 ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿ, ಪಾಸು ಮಾಡಿದ್ದರು. ಹಾಗಾಗಿ, ಹೊಸದಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡುವಂತೆ ಏ.23ರಂದು ಎ.ಸಿ. ಮಂಜುನಾಥ್ ಸೂಚಿಸಿದ್ದರು.
ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯನ್ನು ಚುನಾವಣಾಧಿಕಾರಿ ಲಕ್ಷ್ಮೀಕಾಂತ್ ನಡೆಸಿಕೊಟ್ಟರು. ಈ ವೇಳೆ ಬಿಜೆಪಿ ಸದಸ್ಯರಾದ ಧರಣಿ, ಕಿರಣ್, ಶಿವಪ್ರಸಾದ್, ಕೆ.ಸಿ.ನಾಗರಾಜ್, ಅರುಣಾ ಶ್ರೀನಿವಾಸ್, ಪ್ರಭಾಕರಣ್, ಪ್ರೇಮಾವತಿ, ಬಿ.ಕೆ.ಶ್ರೀನಿವಾಸ್, ಆನಂದ್ ಕಾಂಗ್ರೆಸ್ ಸದಸ್ಯರಾದ ಗೋವಿಂದಮ್ಮ, ದುರ್ಗಾಪ್ರಸಾದ್, ಅಸ್ಲಾಂಬೇಗ್, ಅದೀಲ್‌ಅಹ್ಮದ್, ಅಸ್ಲಾಂಪಾಷ, ಇಬ್ರಾತ್‌ಸನವುಲ್ಲಾ, ಮಹಾಲಕ್ಷ್ಮೀ, ಅಮೀರ್‌ಪಾಷ ಸೇರಿದಂತೆ ಒಟ್ಟು 17 ಸದಸ್ಯರು ಹಾಜರಿದ್ದರು. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕಟಗೊಂಡ ನಂತರ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರುಗಳು ಮತ್ತು ಬೆಂಬಲಿಗರು ಬೇತಮಂಗಲ ಗ್ರಾಮದ ಬಸ್ ನಿಲ್ದಾಣದ ಮುಂಭಾಗ ಪಟಾಕಿಯನ್ನು ಸಿಡಿಸಿ ಸಿಹಿಯನ್ನು ಹಂಚುವ ಮೂಲಕ ಸಂಭ್ರಮಾಚರಿಸಿದರು.
ಈ ವೇಳೆ ಪಿಡಿಒ ಮಹೇಶ್ ಹಾಗೂ ಇತರೆ ಅಧಿಕಾರಿಗಳು, ಸದಸ್ಯರು ಹಾಜರಿದ್ದರು.