ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೇಸಿಗೆ ಶಿಬಿರಗಳು ಮಕ್ಕಳಿಗೆ ವರದಾನ

Mainashree
Updated On : 25 Apr 2014, 12:09 pm

ಕೋಲಾರ: ಬೇಸಿಗೆ ಶಿಬಿರಗಳಿಂದ ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುವುದು ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಲಕ್ಕೂರು ಮಂಜುಳ ಅಭಿಪ್ರಾಯಪಟ್ಟರು.
ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು.
ಯಾವುದೇ ಗುರಿ ಮುಟ್ಟಲು ಮಾರ್ಗದರ್ಶಕರಾಗಿ ಗುರುಗಳು ಅಗತ್ಯ ಇದರ ಜೊತೆಗೆ ಸ್ವ ಸಾಮರ್ಥ್ಯ, ಧೈರ್ಯ, ಆತ್ಮವಿಶ್ವಾಸವಿದ್ದಾಗ ಮಾತ್ರ ಎಂಥ ಸಾಧನೆ ಬೇಕಾದರೂ ಮಾಡಬಹುದು ಎಂದು ವಿವರಿಸಿದರು.
ತನಗೆ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ಆಶಯವಿತ್ತು ಅದಕ್ಕೆ ಪೂರಕವಾಗಿ ನಮ್ಮ ಅಣ್ಣ ಕೋಚ್ ಶಂಕರಪ್ಪ ಅವರು ಪ್ರತಿದಿನ ಓಟದ ಅಭ್ಯಾಸ ಮಾಡುತ್ತಿದ್ದರು, ಆಗ ನನ್ನನ್ನು ಸಹ ಜೊತೆಗೆ ಓಡಲು ಉತ್ತೇಜಿಸಿದ ಹಿನ್ನೆಲೆಯಲ್ಲಿ ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವಷ್ಟು ಸಾಮರ್ಥ್ಯ ಬೆಳೆಯಿತು ನನ್ನ ಸಾಧನೆಗೆ ಏಕಲವ್ಯ ಪ್ರಶಸ್ತಿಯು ದೊರೆಯಿತು ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಮಾತನಾಡಿ ಈ ಶಿಭಿರದ ಕ್ರೀಡಾಪಟುಗಳಿಗೆ ಮಂಜುಳ ಸಾಧನೆ ಪ್ರೇರಣೆಯಾಗಲಿದೆ, ಇವರು ಬಡತನದ ಆರ್ಥಿಕ ಸಮಸ್ಯೆ ನಡುವೆ ಏಕಲವ್ಯ ಪ್ರಶಸ್ತಿ ಗಳಿಸಿರುವುದು ಕಡಿಮೆ ಸಾಧನೆಯೇನಲ್ಲ, ಈ ಸಾಧನೆಗೂ ಮುನ್ನ ಹಲವಾರು ಟೀಕೆ-ಟಿಪ್ಪಣಿಗಳೇ ಅವರ ಸಾಧನೆಯ ಮೆಟ್ಟಿಲುಗಳಾಗಿತ್ತು ಎಂದರು.
ಬಾಸ್ಕೆಟ್‌ಬಾಲ್ ಕೋಚರ್ ಅಂಚೆ ಅಶ್ವಥ್ ಮಾತನಾಡಿ ಈ ಹಿಂದೆ ಫುಟ್ಬಾಲ್, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್ ಇತ್ಯಾದಿಗಳಲ್ಲಿ ಹೆಚ್ಚಿನ ಕ್ರೀಡಾ ಪಟುಗಳು ಅಭ್ಯಾಸದಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿತ್ತು, ರಾಜ್ಯದ ಯಾವುದೇ ಕ್ರೀಡೆಗಳಲ್ಲೂ ಕೋಲಾರದ ಕ್ರೀಡಾಪಟುಗಳು ಮಿಂಚುತ್ತಿದ್ದರು ಎಂದು ವಿವರಿಸಿದರು.
ಮಕ್ಕಳು ಟಿ.ವಿ.ನೋಡುವುದು ಬಿಟ್ಟು ಆಟದ ಮೈದಾನಕ್ಕೆ ಬರುವಂತಾಗಬೇಕು, ಮಂಜುಳ ಮಾದರಿಯಲ್ಲಿ ಜೀವನದಲ್ಲಿ ಏನಾದರೂ ಸಾಧಿಸುವಂತಾಗಬೇಕು, ಸರ್ಕಾರವು ಕ್ರೀಡಾ ಪಟುಗಳಿಗೆ ವಿಶೇಷವಾದ ಅಂಕಗಳು ನೀಡುವಂತಾದರೆ ಶಿಕ್ಷಣ ಕ್ಷೇತ್ರದಲ್ಲೂ ಉತ್ತಮ ಪ್ರೋತ್ಸಾಹ ದೊರೆಯುವಂತಾಗುವುದು ಎಂದರು.
ನಗರಸಭಾ ಮಾಜಿ ಸದಸ್ಯ ಹಾಗೂ ಅಥ್ಲೆಟಿಕ್ ಕ್ರೀಡಾಪಟು ತ್ಯಾಗರಾಜ್ ಮಾತನಾಡಿ ಕೋಲಾರ ಕ್ರೀಡಾಪಟುಗಳು ಕೇವಲ ರಾಜ್ಯ ಮಟ್ಟದಲ್ಲಿ ಅಲ್ಲ ರಾಷ್ಟ್ರಮಟ್ಟದಲ್ಲೂ ದಾಖಲೆಗಳ ನಿರ್ಮಾಣ ಮಾಡಿದ್ದಾರೆಂದರು. ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕ ರುದ್ರಪ್ಪ, ಜಿಲ್ಲಾ ತರಬೇತುದಾರ ಶಂಕಪ್ಪ, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಜಯದೇವ್, ತರಬೇತುದಾರ ನಾರಾಯಣಸ್ವಾಮಿ, ಗೋಪಾಲಕೃಷ್ಣ, ಜಗನ್ನಾಥ್, ನಾಸ್ಸೀರ್, ಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement