ನೀರಿಗೆ ನೀರೆಯರ ಪ್ರತಿಭಟನೆ
ಬಾಗೇಪಲ್ಲಿ: ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡುವಲ್ಲಿ ಪುರಸಭೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪಟ್ಟಣದ 7 ನೇ ವಾರ್ಡಿನ ಮಹಿಳೆಯರು ಖಾಲಿ ಬಿಂದಿಗೆಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದ 7ನೇ ವಾರ್ಡಿನ ಯಂಗ್ ಇಂಡಿಯಾ ಶಾಲೆಯ ಹಿಂಭಾಗದಲ್ಲಿ ಕಳೆದ ಸುಮಾರು 6 ತಿಂಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಇದರಿಂದ ಈ ಭಾಗದಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ವಾರ್ಡಿನಲ್ಲಿ 30 ಕುಟುಂಬಗಳಿದ್ದು ಕನಿಷ್ಠ 10-15 ದಿನಗಳಿಗೊಮ್ಮೆಯಾದರೂ ನೀರನ್ನು ಬಿಡುತ್ತಿಲ್ಲ. ಇದರಿಂದ ನೀರನ್ನು ಹಣ ಕೊಟ್ಟು ಖರೀದಿಸಬೇಕಾಗಿದ್ದು ಬಡವರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈಗಲಾದರೂ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲು ಮುಂದಾಗಬೇಕೆಂದು ಪುರಸಭೆಯ ಅಧಿಕಾರಿಗಳನ್ನು ಒತ್ತಾಯಿಸಿದರು. ಮುಖಂಡರಾದ ಫಜಲ್ನೂನಿಸ, ಎನ್. ಬಿಬೀಜಾನ್, ಬಾನು, ನಾಗರತ್ನ, ಗಂಗರಾಜಮ್ಮ, ಮಮ್ತಾಜ್, ಜಯಮ್ಮ, ನಾಸೀರಮ್ಮ, ಗಾಯಿತ್ರಿ, ಅಮೀನಾ, ಅಂಜಲಿ, ಸರಸ್ವತಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.