ಮಾಲೂರು ಗ್ರಾಮ ದೇವತೆ ಜಾತ್ರೆ
ಮಾಲೂರು: ಮಾಲೂರು ಗ್ರಾಮ ದೇವತೆ ಜಾತ್ರೆಯ ಅಂಗವಾಗಿ ಪಟ್ಟಣದ ಪಟಾಲಮ್ಮ, ಮುತ್ಯಾಲಮ್ಮ ಹಾಗೂ ಸಫಲಾಂಭ ದೇವಿ ದೇವಾಲಯಗಳಲ್ಲಿ ಶುಕ್ರವಾರ ವಿಶೇಷ ಪೊಜೆ, ಆರತಿ ದೀಪೋತ್ಸವ ನಡೆಯಿತು.
ಬೆಳಗ್ಗೆಯಿಂದಲೇ ಗೃಹಣಿಯರು ಬೆಲ್ಲದಲ್ಲಿ ನಿರ್ಮಿಸಿರುವ ತುಪ್ಪದ ದೀಪಗಳನ್ನು ಹೊತ್ತು ತಂದು ಪಟಾಲಮ್ಮ ದೇವಿಗೆ ಪೊಜೆ ಸಲ್ಲಿಸಿದರು. ಈ ಗೃಹಿಣಿಯರಿಗೆ ಬಳೆ-ಕುಂಕುಮ ಸಮೇತ ಪ್ರಸಾದ ವಿನಿಯೋಗ ಮಾಡಲಾಯಿತು. ಸುತ್ತಮುತ್ತಲ ಗ್ರಾಮಗಳಿಂದ ಮಲ್ಲಿಗೆ ಹೂವುಗಳಿಂದ ಶೃಂಗರಿಸಿದ ದೀಪಗಳನ್ನು ಹೊತ್ತು ಮಹಿಳೆಯರು ತಂಡೋಪತಂಡವಾಗಿ ದೇವಾಲಯಕ್ಕೆ ಬಂದು ಆರತಿ ದೀಪೋತ್ಸವದಲ್ಲಿ ಪಾಲ್ಗೊಂಡರು. ತಹಸೀಲ್ದಾರ್ ಶಿವು ಕುಮಾರ್, ಕಂದಾಯ ನಿರೀಕ್ಷಕ ಮುನಿಸ್ವಾಮಿ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಬೆಸ್ಕಾಂ ಅಭಿಯಂತರರ ವಾಸುದೇವ್, ದೇವಾಲಯ ಸಮಿತಿಯ ಕೋಲ್ಮಿ ಗೋಪಾಲ್ ಕೃಷ್ಣ, ರಮೇಶ್, ಮಧುಸೂಧನ್,ನಾರಾಯಣಸ್ವಾಮಿ ಇದ್ದರು.