ರಾಜಕೀಯ ದ್ವೇಷದಿಂದ ಮನೆಗೆ ಬೆಂಕಿ
ಚಿಂತಾಮಣಿ: ಮಜರಾ ಕೃಷ್ಣಾಪುರ ಗ್ರಾಮದ ಮನೆ ಬೆಂಕಿ ಪ್ರಕರಣ ತಿರುವು ಪಡೆದಿದ್ದು, ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದಲ್ಲ. ಬದಲಾಗಿ ಚೌಡಪ್ಪ ಎಂಬಾತ ರಾಜಕೀಯ ದುರುದ್ದೇಶದಿಂದಾಗಿ ಬೆಂಕಿ ಹಾಕಿದ್ದಾನೆ. ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಗಡಿಗವಾರಹಳ್ಳಿ ಮಜುರಾ ಕೃಷ್ಣಾಪುರದಲ್ಲಿ ಕಳೆದ ಬುಧವಾರ ರಾತ್ರಿ ರೈತ ನಡಪಿನಾರಾಯಣಸ್ವಾಮಿ ಎಂಬವರ ಮನೆಗೆ ಬೆಂಕಿ ಬಿದ್ದಿತ್ತು. ಈ ಬಗ್ಗೆ ನಡಪಿ ನಾರಾಯಣಸ್ವಾಮಿ ದೂರು ನೀಡಿದ್ದರು. ಕೆಂಚಾರ್ಲಹಳ್ಳಿ ಪಿಎಸ್‌ಐ ರಾಜಣ್ಣ ಈ ಪ್ರಕಣದ ಪ್ರಮುಖ ಆರೋಪಿ ಚೌಡಪ್ಪ ಅವರನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.
ಚಿನ್ನದ ಸರ ಕಸಿಯುವಾಗ ಸಾರ್ವಜನಿಕರಿಗೆ ಸಿಕ್ಕಿ ಬಿದ್ದ
ಚಿಂತಾಮಣಿ: ಹಾಡಹಗಲೇ ಮಹಿಳೆ ಕತ್ತಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಮೂವರು ಯುವಕರು ಪರಾರಿಯಾಗಲು ಯತ್ನಿಸುತ್ತಿರುವಾಗಲೇ ಒಬ್ಬ ಸಾರ್ವಜನಿಕರ ಕೈಗೆ ಸಿಕ್ಕು ಬಿದ್ದಿರುವ ಘಟನೆ ಪಟ್ಟಣದ ಅಂಜನಿ ಚಿತ್ರಮಂದಿರ ಬಳಿ ನಡೆದಿದೆ. ಮೂವರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಬೊಮ್ಮೆಕಲ್ಲು ಗ್ರಾಮದ ಸುಗುಣ ಎಂಬಾಕೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಬಂದ ಮೂವರು, 30 ಗ್ರಾಮದ ಚಿನ್ನದ ಸರ ಕಸಿದುಕೊಂಡು ಪಾರಾಗಲು ಯತ್ನಿಸಿದ್ದಾರೆ. ಆಗ ಮೂವರ ಪೈಕಿ ಆಂಧ್ರ ಮೂಲದ ಸುನಿಲ್ ಎಂಬಾತ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಕ್ರಮ ಮರಳು: ಲಾರಿ ವಶ
ಚಿಂತಾಮಣಿ: ಅಕ್ರಮ ಮರಳು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಜಿಲ್ಲಾ ಅಪರಾಧ ವಿಭಾಗದ ದಳ ಪೊಲೀಸರು ಹಾಗೂ ಸ್ಥಳೀಯ ಗ್ರಾಮಾಂತರ ಠಾಣೆ ಪೊಲೀಸರು ಜಂಟಿ ದಾಳಿ ನಡೆಸಿ, ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ತಾಲೂಕಿನ ಕೈವಾರ ಕ್ರಾಸ್ ಮಾರ್ಗ ಮೂಲಕ ಬೆಂಗಳೂರಿಗೆ 2 ಲಾರಿಗಳಲ್ಲಿ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.
ಅಪಘಾತ: ಇಬ್ಬರಿಗೆ ಗಾಯ
ಬಂಗಾರಪೇಟೆ: ಆಟೋ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ಬೂದಿಕೋಟೆ ಬಳಿ ನಡೆದಿದೆ. ಬೂದಿಕೋಟೆಯ ಬೋಡಗುರ್ಕಿ ಕ್ರಾಸ್ ಬಳಿ ಆಟೋ ಬರುತ್ತಿದ್ದಾಗ ಎದುರಿನಿಂದ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಮುನಿರತ್ನಂ ಮತ್ತು ಸರಸ್ವತಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.