ಲೋಕಾ ಬಲೆಗೆ ಭಾರೀ ತಿಮಿಂಗಿಲಗಳು!
ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ ಗ್ರೂಫ್ ನೌಕರನ ಮನೆಯ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ನಿರಂತರವಾಗಿ 10 ಗಂಟೆ ಕಾಲ ಶೋಧ ಕಾರ್ಯದಲ್ಲಿ ತಲ್ಲೀನರಾದ ಸ್ಥಳೀಯ ಲೋಕಾಯುಕ್ತ ಪೊಲೀಸರು ಅಕ್ರಮವಾಗಿ ಸಂಪಾದಿಸಿರುವ ಕೋಟ್ಯಂತರ ರು. ಮೌಲ್ಯದ ಆಸ್ತಿಪಾಸ್ತಿ, ಒಡವೆಗಳನ್ನು ಪತ್ತೆ ಹಚ್ಚಿದ್ದಾರೆ.
ರಾಜ್ಯಾದ್ಯಂತ ಲೋಕಾಯುಕ್ತ ಪೊಲೀಸರು ಶುಕ್ರವಾರ ಬೆಳ್ಳಂಬೆಳಿಗ್ಗೆ ವಿವಿಧೆಡೆ ಅನಿರೀಕ್ಷಿತವಾಗಿ ದಾಳಿ ನಡೆಸಿ ಭ್ರಷ್ಟ ಸರ್ಕಾರಿ ನೌಕರರಿಗೆ ಶಾಕ್ ಕೊಟ್ಟಿದ್ದು ಚಿಕ್ಕಬಳ್ಳಾಪುರದಲ್ಲೂ ಲೋಕಾಯುಕ್ತರ ಕಾರ್ಯಾಚರಣೆ ನಡೆಯಿತು. ಜಿಲ್ಲಾಧಿಕಾರಿಗಳ ಕಚೇರಿಯ ಡಿ ಗ್ರೂಪ್ ನೌಕರನಾಗಿರುವ ಡಿ. ರಾಮಯ್ಯ ಮನೆಯಲ್ಲಿ ನಗನಾಣ್ಯ ಸೇರಿದಂತೆ ದಾಖಲೆಗಳನ್ನು ಜಾಲಾಡಲಾಯಿತು. ನಗರದ ಕೆಳಗಿನ ತೋಟದಲ್ಲಿ (ಸರ್. ಎಂ.ವಿ. ಜಿಲ್ಲಾ ಕ್ರೀಡಾಂಗಣದ ಬಳಿ) ಇರುವ ಮನೆಗೆ ಲೋಕಾಯುಕ್ತ ಪೊಲೀಸರ ತಂಡ ವ್ಯವಸ್ಥಿತ ಕಾರ್ಯಾಚರಣೆಯನ್ವಯ ಒಳ ನುಗ್ಗುತ್ತಿದ್ದಂತೆ ಬೆಳಿಗ್ಗೆಯ ನಿದ್ದೆ ಮಂಪರಿನಲ್ಲಿದ್ದ ರಾಮಯ್ಯ ಕಕ್ಕಾಬಿಕ್ಕಿಯಾದರು. ಕುಟುಂಬದವರಿಗೆ ಏನೂ ನಡೆಯುತ್ತಿದೆ ಎನ್ನುವುದೇ ಅರ್ಥವಾಗಲಿಲ್ಲ. ಇದರಿಂದ ಪ್ರಾರಂಭದಲ್ಲಿ ಪ್ರತಿರೋಧ ವ್ಯಕ್ತಪಡಿಸಿದರೂ ಲೋಕಾಯುಕ್ತರ ಖಡಕ್ ನುಡಿಗಳಿಗೆ ಕೊನೆಗೆ ಮೌನಕ್ಕೆ ಶರಣಾಗಿ ಸಹಕರಿಸಿದರು.
ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ ಕಾರ್ಯಾಚರಣೆ ಸಂಜೆ 4 ಗಂಟೆವರೆಗೂ ನಡೆಯಿತು. ಇಡೀ ಮನೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಪೊಲೀಸರಿಗೆ ಕೋಟ್ಯಂತರ ರು. ಮೌಲ್ಯದ 5 ಮನೆಗಳು ಮತ್ತು ಒಂದು ನಿವೇಶನದ ದಾಖಲೆಗಳು, 500 ಗ್ರಾಂ ಚಿನ್ನ, 3 ಕೆ.ಜಿ.ಬೆಳ್ಳಿ, 3 ಸಾವಿರ ರು. ನಗದು, ಎರಡು ಬೈಕ್ ಮತ್ತು ಒಂದು ಕಾರು ಸೇರಿದಂತೆ ತಮ್ಮ ಸಂಪಾದನೆಗೂ ಮೀರಿ ರಾಮಯ್ಯ ಮೂರು ಪಟ್ಟು ಹೆಚ್ಚಿನ ಆದಾಯ ಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನೂ ಅಂತಿಮವಾಗಿ ಬೇರೆ ಬೇರೆ ಕಡೆ ಆಸ್ತಿಪಾಸ್ತಿಗಳು ಬಹಿರಂಗವಾಗಬೇಕಾಗಿದೆ.
ಒಟ್ಟಾರೆ 40 ಲಕ್ಷ ರು. ಆದಾಯವನ್ನು ಹೊಂದಿರಬೇಕಾದ ರಾಮಯ್ಯ ಸರಿ ಸುಮಾರು 2 ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ. ಹೆಂಡತಿ ನಾಗರತ್ನ, ಮಕ್ಕಳ ಹೆಸರಿನಲ್ಲಿಟ್ಟಿರುವ ಆಸ್ತಿಪಾಸ್ತಿಯ ಬಗ್ಗೆ ಇನ್ನೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.
ಲೋಕಾಯುಕ್ತ ಎಸ್‌ಪಿ ಚಂದ್ರಶೇಖರಯ್ಯ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಬೂಪಯ್ಯ, ಇನ್ಸ್‌ಪೆಕ್ಟರ್ ಮಂಜೇಶ್ ಗೌಡ, ಸಿಬ್ಬಂದಿ ಮುಬಿನ್ ತಾಜ್, ವೆಂಕಟರಾಜು, ರಾಮಲಕ್ಷ್ಮಣ್, ಮುಸ್ತಾಫ್, ಹಿರೇಮಠ್, ಮಂಜುನಾಥ್, ಹೆಚ್.ಸಿ. ಆಂಜಿನಪ್ಪ, ಸಂತೋಷ್, ರಾಮಾಂಜಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಮನೆಯೇ ಡಿಸಿ ಕಚೇರಿ:
ನಗರದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣದ ಬಳಿ ಮೂರು ಅಂತಸ್ತಿನ ಎರಡು ದೊಡ್ಡ ಮನೆಗಳೇ ಕೋಟ್ಯಂತರ ರು. ಮೌಲ್ಯ ಬಾಳುತ್ತದೆ. ಇದಲ್ಲದೇ ಇತ್ತೀಚೆಗೆ ಎರಡು ಹೊಸ ಮನೆಗಳನ್ನು ರಾಮಯ್ಯ ಕೊಂಡಿದ್ದಾರೆ. ತಮ್ಮ ಹೆಂಡತಿ ಮತ್ತು ಮಗನ ಹೆಸರಿನಲ್ಲಿ ತಲಾ ಒಂದು ಮನೆಯನ್ನಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಒಂದು ಮನೆಗೆ ಜಿಲ್ಲಾಧಿಕಾರಿಗಳ ಕಚೇರಿ ಎಂತಲೇ ನಾಮಫಲಕವನ್ನು ರಾಜಾರೋಷವಾಗಿ ಹಾಕಿರುವುದು ವಿಶೇಷವಾಗಿದೆ. ಒಳಗೆ ಲೋಕಾಯುಕ್ತರು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದರೆ, ಇಲ್ಲಿ ಏನೂ ನಡೆದಿಲ್ಲ ಎನ್ನುವಂತೆ ನೀವು ಮನೆಗೆ ಹೋಗಿ ಸಾರ್, ಏನೇನು ಬರೆಯಬೇಡಿ ಎಂದು ಬಲೆಗೆ ಸಿಕ್ಕಿ ಬಿದ್ದ ರಾಮಯ್ಯ ಪತ್ರಕರ್ತರನ್ನು ಅಲ್ಲಿಂದ ಸಾಗಹಾಕಲು ನಾನಾ ರೀತಿಯಲ್ಲಿ ಕಸರತ್ತನ್ನೂ ನಡೆಸಿದರು. ಮನೆಯೊಳಗೆ ಲೋಕಾಯುಕ್ತರ ಕಾರ್ಯಾಚರಣೆಯ ಫೋಟೋಗಳನ್ನು ತೆಗೆದುಕೊಳ್ಳಲು ಮುಂದಾದಾಗಲು ಸಹ ಸಾಕು ಸಾಕು, ಹೆಚ್ಚಿಗೆ ಫೋಟೋಗಳನ್ನು ತೆಗೆಯಬೇಡಿ ಎಂತಲೂ ಆಜ್ಞೆ ನೀಡುವ ಕೆಲಸವನ್ನು ಮಾಡಿದರು.