ಸಭೆಗೆ ಜನಪ್ರತಿನಿಧಿಗಳ ಗೈರು
ಕೋಲಾರ: ರೈತರ ಆತ್ಮಹತ್ಯೆ ತಡೆಯಲು ಮತ್ತು ಶಾಶ್ವತ ನೀರಾವರಿ ಯೋಜನೆಗಳ ತ್ವರಿತ ಜಾರಿಗೆ ಒತ್ತಾಯಿಸಿಲು ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಗೆ ಜನಪ್ರತಿನಿಧಿಗಳು ಗೈರು ಹಾಜರಾಗಿದ್ದಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ರೈತರು ಏನೇ ಕಷ್ಟ ಬಂದರೂ ಆತ್ಮಹತ್ಯೆ ಮಾಡಿಕೊಳ್ಳದೆ ಧೈರ್ಯದಿಂದ ಜೀವನ ಸಾಗಿಸುತ್ತಿದ್ದರು, ಆದರೆ,ಬ್ಯಾಂಕುಗಳಿಂದ ಪಡೆದ ಸಾಲ ತೀರಿಸಲಾಗದೆ ಹಾಗೂ ಅಧಿಕಾರಿಗಳ ಕಿರುಕುಳ ತಾಳಲಾರದೆ ಸಾವಿಗೆ ಶರಣಾಗಿದ್ದಾರೆ. ಇದೇ ಮೊದಲ ಬಾರಿಗೆ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಮುಂದೆ ಈ ರೀತಿಯ ಘಟನೆಗಳು ಆಗದಂತೆ ಜವಾಬ್ದಾರಿ ಹೊರಬೇಕಾದ ಜನಪ್ರತಿನಿಧಿಗಳು ದುಂಡು ಮೇಜಿನ ಸಭೆಗೆ ಆಗಮಿಸದಿರುವುದು ರೈತರ ಬಗ್ಗೆ ಇರುವ ಅನಾಧಾರಣೆ ತೋರುತ್ತಿದೆ ಎಂದು ಟೀಕಿಸಿದರು.
ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಅವರೊಬ್ಬರು ಮಾತ್ರ ತಮಗೆ ದೂರವಾಣಿ ಮುಖೇನ ಸಭೆಗೆ ಹಾಜರಾಗಲು ಸಾಧ್ಯವಾಗದಿರುವುಕ್ಕೆ ಕಾರಣ ತಿಳಿಸಿದ್ದು, ಇನ್ನುಳಿದಂತೆ ಜಿಲ್ಲೆಯ ಯಾವುದೇ ಶಾಸಕರು ಸಭೆಗೆ ಬಾರದಿರುವುದು ಖಂಡನಾರ್ಹವೆಂದರು.
ಜಿಲ್ಲೆಯ ಜನಪ್ರತಿನಿಧಿಗಳು ಇಂತಹ ಸಭೆಗಳಿಗೆ ಬಂದು ರೈತರ ಪರ ನಾವಿದ್ದೇವೆ, ಸರ್ಕಾರದಿಂದ ಆಗಬೇಕಾಗಿರುವ ಕೆಲಸ ಮಾಡಿಸಿಕೊಡುತ್ತೇವೆ,ರೈತರಿಗೆ ಸಾಲದ ಹೊರೆ ಹೆಚ್ಚಾಗಲು ನೀರಿನ ಸಮಸ್ಯೆಯೂ ಪ್ರಮುಖ ಕಾರಣವಾಗಿರುವುದರಿಂದ ಶಾಶ್ವತ ನೀರಾವರಿ ಯೋಜನೆಗಳ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆಂದು ಭರವಸೆ ನೀಡಬೇಕಾಗಿದ್ದ ಜನಪ್ರತಿನಿಧಿಗಳು ಲೋಕಸಭಾ ಚುನಾವಣೆಯ ಗುಂಗಿನಿಂದ ಹೊರ ಬರದೇ ವಿಶ್ರಾಂತಿ ಪಡೆಯಲು ದೇಶ-ವಿದೇಶಗಳನ್ನು ಸುತ್ತಾಡಲು ಹೋಗಿದ್ದಾರೆಂದು ಆರೋಪಿಸಿದರು.
ನೀರಾವರಿ ನಿಗಮಕ್ಕೆ ಆಗ್ರಹ: ಲೋಕಸಭಾ ಚುನಾವಣೆ ಬರುವುದು ಇನ್ನು 5 ವರ್ಷಗಳ ನಂತರವೇ. ಗೆದ್ದವರು ಜಿಲ್ಲೆಯನ್ನು ಮರೆಯಬಾರದು, ಸಂಸತ್ತಿನಲ್ಲಿ ಜನರ ಪರವಾಗಿ ದನಿ ಎತ್ತಬೇಕು, ಅದೇ ರೀತಿ ಶಾಸಕರು ವಿಧಾನಸಭೆಗಳಲ್ಲಿ ಮತ್ತು ಹೊರಗಡೆ ತಮ್ಮ ಕ್ಷೇತ್ರದ ಜನರ ಕಷ್ಟಗಳ ನಿವಾರಣೆಗೆ ಶ್ರಮಿಸದಿದ್ದರೆ ಜನರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎತ್ತಿನ ಹೊಳೆ ಯೋಜನೆಯನ್ನು 4ವರ್ಷದಲ್ಲಿ ಮುಗಿಸಬೇಕು, ಇದಕ್ಕಾಗಿ ಪ್ರತಿವರ್ಷ 4 ಸಾವಿರ ಕೋಟಿ ಮೀಸಲಿಡಬೇಕು, ದಿ.ಜಿ.ಎಸ್. ಪರಮಶಿವಯ್ಯ ವರದಿ ಅನುಷ್ಠಾನಕ್ಕೆ ತರಲು ಕಾರ್ಯಪ್ರವೃತ್ತರಾಗಬೇಕು, ಶರಾವತಿ ನದಿ ಮೂಲಗಳಿಂದ ಕೋಲಾರ ಜಿಲ್ಲೆಯನ್ನು ಒಳಗೊಂಡ ಬಯಲು ಸೀಮೆ ಜಿಲ್ಲೆಗಳಿಗೆ ನೀರು ತರಬಹುದೆಂದು ಡಾ. ತ್ಯಾಗರಾಜನ್ ಹಾಗೂ ಡಾ. ಮಧುಸೀತಪ್ಪನವರ ವರದಿಯ ಬಗ್ಗೆ ಅಧ್ಯಯನ ಮಾಡಿ ವರದಿ ಜಾರಿಗೆ ಪ್ರಯತ್ನಿಸಬೇಕು, ಬಯಲು ಸೀಮೆ ಪ್ರದೇಶದ ನೀರಾವರಿ ನಿಗಮ ಸ್ಥಾಪಿಸಬೇಕು ಹಾಗೂ ಕೋಲಾರ ಜಿಲ್ಲೆಯ ಕೆರೆ, ಕಾಲುವೆಗಳನ್ನು ಅಭಿವೃದ್ಧಿಪಡಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಭರವಸೆ: ಸಭೆಯಲ್ಲಿ ಪಾಲ್ಗೊಂಡಿದ್ದ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡ, ಡಿಸಿಸಿ ಬ್ಯಾಂಕಿಗೆ ಹೊಸ ಆಡಳಿತ ಮಂಡಲಿ ಬಂದ ಮೇಲೆ ರೈತರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ಹಾಗೂ ಶೇ.3 ಬಡ್ಡಿಗೆ 10 ಲಕ್ಷ ರು.ಸಾಲ ನೀಡುವ ಉದ್ದೇಶವಿಟ್ಟುಕೊಳ್ಳಲಾಗಿದೆ. ರೈತರು ಮೊದಲು ಬ್ಯಾಂಕಿನಲ್ಲಿ ಖಾತೆ ತೆರೆಯಬೇಕು, ಸಾಲ ಪಡೆಯುವವರು ಮರು ಪಾವತಿಗೆ ಜವಾಬ್ದಾರಿ ಹೊತ್ತುಕೊಂಡಲ್ಲಿ ಡಿಸಿಸಿ ಬ್ಯಾಂಕ್ ರೈತರ ಮನೆ ಬಾಗಿಲಿಗೆ ಹೋಗಿ ಸಾಲ ನೀಡುವುದಕ್ಕೆ ಬದ್ಧವಾಗಿದೆ ಎಂದರು.
ಸಭೆಯಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಸೂರ್ಯ ನಾರಾಯಣ, ಕಾರ್ಯದರ್ಶಿ ವೆಂಕಟೇಶ್, ತಾಲೂಕು ಅಧ್ಯಕ್ಷ ಕುರ್ಕಿ ದೇವರಾಜ್ ಮತ್ತಿತರರು ಇದ್ದರು.