ಸಿಪಿಐ ಮುಖಂಡ ರಾಧಾಕೃಷ್ಣ ಬರ್ಬರ ಹತ್ಯೆ
ಕೋಲಾರ/ಮುಳಬಾಗಲು: ಮುಳಬಾಗಲು-ಕೆಜಿಎಫ್ ಬೈಪಾಸ್ ರಸ್ತೆಯ ತೊರಡಿ ಗ್ರಾಮದ ಬಳಿ ಸಿಪಿಐ ಮುಖಂಡ ಟಿ. ರಾಧಾಕೃಷ್ಣ(42)ೈರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ರಾಧಾಕೃಷ್ಣ ಒತ್ತಾಯಿಸಿರುವ ಹಿನ್ನಲೆಯಲ್ಲಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಮುಳಬಾಗಲು ತಾಲೂಕಿನ ಅಸಲಿ ಅತ್ತಿಕುಂಟೆ ಗ್ರಾಮದ ಪಾಪಣ್ಣ ಎಂಬುವರ ಕೈವಾಡವಿದ್ದು ಇವರ ವಿರುದ್ಧ ಎಫ್ಐಆರ್ ದಾಖಲು ಮಾಡಬೇಕೆಂದು ಮೂರು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಪಂಚಾಯಿತಿ ಸಭೆಯಲ್ಲಿ ರಾಧಾಕೃಷ್ಣ ಒತ್ತಾಯಿಸಿದ್ದರಿಂದ ಕುಪಿತರಾದ ಪಾಪಣ್ಣನವರ ಮಗ ಶಿವಕುಮಾರ್ ಹಾಗೂ ಎರಡು ವರ್ಷಗಳ ಹಿಂದೆ ಬಲ್ಲಂ ರಾಮಕೃಷ್ಣ ಎಂಬುವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಹರೀಶ್ ಎಂಬುವರು ಸೇರಿ ಈ ಕೃತ್ಯವೆಸಗಿದ್ದಾರೆಂದು ಮೃತನ ಸಂಬಂಧಿಕರು ಹಾಗೂ ಸಿಪಿಐ ಕಾರ್ಯಕರ್ತರು ದೂರಿದ್ದಾರೆ.
ಅಸಲಿ ಅತ್ತಿಕುಂಟೆ ಗ್ರಾಮದ ನಿವಾಸಿ ರಾಧಾಕೃಷ್ಣನನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಮುಳಬಾಗಲು-ಕೆಜಿಎಫ್ ಬೈಪಾಸ್ ರಸ್ತೆ ತೊರಡಿ ಗ್ರಾಮದ ಬಳಿ ನಿಲ್ಲುವ ಬೋರ್ ವೆಲ್ ಕೊರೆಯುವ ಲಾರಿಗಳ ಸ್ಥಳಕ್ಕೆ ಪಾರ್ಟಿ ನೀಡುವ ನೆಪದಲ್ಲಿ ಕರೆಸಿ ಕಲ್ಲಿನಿಂದ ಮುಖಕ್ಕೆ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆಂದು ಸಂಬಂಧಿಕರು ಆರೋಪಿಸಿದ್ದಾರೆ.
ರಾಧಾಕೃಷ್ಣ ಕೊಲೆಯ ವಿಚಾರ ಶುಕ್ರವಾರ ಮುಳಬಾಗಲು ತಾಲೂಕಿನಾದ್ಯಂತ ಕಾಡ್ಗಿಚ್ಚಿನಂತೆ ಹರಡಿ, ಸಿಪಿಐ ಕಾರ್ಯಕರ್ತರು ಹಾಗೂ ಮೃತನ ಸಂಬಂಧಿಕರು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಹಿರಿಯ ವಕೀಲ ಕೆ.ವಿ. ಶಂಕರಪ್ಪ, ಸಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಗೋಪಾಲ್ ಮಾತನಾಡಿ, ಮುಳಬಾಗಲು ತಾಲೂಕಿನಲ್ಲಿ ಕಳೆದ ಐದಾರು ವರ್ಷಗಳಿಂದ ರಾಜಕೀಯ ಪ್ರೇರಿತ ಕೊಲೆಗಳು ನಡೆಯುತ್ತಿದೆ, ಇದರಿಂದ ಊರಿಗೆ ಕೆಟ್ಟ ಹೆಸರು ಬರುತ್ತಿದೆ, ಏನೇ ಭಿನ್ನಾಭಿಪ್ರಾಯಗಳು ಇದ್ದರೂ ಶಾಂತಿಯುತವಾಗಿ ಮತ್ತು ಕಾನೂನಾತ್ಮಕವಾಗಿ ಇತ್ಯರ್ಥ ಮಾಡಿಕೊಳ್ಳಬೇಕೆ ಹೊರತು ಕೊಲೆ ಮಾಡುವಂತಹ ಹೀನ ಕೃತ್ಯಕ್ಕೆ ಹೋಗಬಾರದೆಂದು ತಿಳಿಸಿದರು.
ಸಿ.ವಿ. ಗೋಪಾಲ್, ಗೊಲ್ಲಹಳ್ಳಿ ವೆಂಕಟೇಶ್, ಮೆಕಾನಿಕ್ ಶ್ರೀನಿವಾಸ್, ಸಂಗಸಂದ್ರ ವಿಜಯಕುಮಾರ್ ಎಂ.ವೆಂಕಟರವಣಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪರಿಹಾರಕ್ಕೆ ಆಗ್ರಹ: ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು, ಮೃತ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ಹಾಗೂ ಸೂಕ್ತ ಪರಿಹಾರಕ್ಕೆ ಸಿಪಿಐ ಕಾರ್ಯಕರ್ತರು ಆಗ್ರಹಿಸಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಮೀಲ್ ಮತ್ತು ತಹಸೀಲ್ದಾರ್ ಕೆ. ಏಕೇಶ ಬಾಬು ಸ್ಥಳಕ್ಕೆ ಆಗಮಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದರು. ಮುಂಜಾಗ್ರತಾ ಕ್ರಮವಾಗಿ ಅಸಲಿ ಅತ್ತಿಕುಂಟೆ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕೊಲೆಗೀಡಾದ ಸಿಪಿಐ ತಾಲೂಕು ಕಾರ್ಯದರ್ಶಿ ರಾಧಾಕೃಷ್ಣ 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಅವರಿಗೆ ಬೆಂಬಲ ಸೂಚಿಸಿದ್ದರಾದರೂ ಪಕ್ಷ ಬಿಟ್ಟಿರಲಿಲ್ಲ.