ಗುಣಾತ್ಮಕ ಶಿಕ್ಷಣ ಅತ್ಯವಶ್ಯಕ
ಕೋಲಾರ: ಜಾಗತಿಕ ಮಟ್ಟದಲ್ಲಿ ಸವಾಲು ಎದುರಿಸುವ ಉನ್ನತ ಹಾಗೂ ಗುಣಾತ್ಮಕ ಶಿಕ್ಷಣ ಭಾರತಕ್ಕೆ ಬೇಕಾಗಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋದನೆಯಲ್ಲಿ ತೊಡಗಬೇಕೆಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ತಿಳಿಸಿದರು.
ನಗರ ಹೊರವಲಯದ ಗೋಕುಲ ವಿದ್ಯಾಸಂಸ್ಥೆಯಲ್ಲಿ ಸಂಸ್ಥೆಯ ಆರ್ಟ್ಸ್, ಸೈನ್ಸ್ ಅಂಡ್ ಮ್ಯಾನೇಜ್ಮೆಂಟ್ ಸ್ಟಡೀಸ್ ಹಾಗೂ ಸ್ನಾತ್ತಕೋತ್ತರ ಕೇಂದ್ರದ ವತಿಯಿಂದ ಆಯೋಜಿಸಿದ್ದ, ಕಾಲೇಜು ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಪ್ರಪಂಚದ ಎಲ್ಲಾ ದೇಶಗಳಲ್ಲಿ ಭಾರತ ಅತಿ ಹೆಚ್ಚು ಯುವ ಸಂಪನ್ಮೂಲವನ್ನು ಹೊಂದಿರುವ ರಾಷ್ಟ್ರವಾಗಿದ್ದು ಪ್ರತಿಭೆಯೂ ಅಗಾಧವಾಗಿದೆ. ಆದರೆ ಸೂಕ್ತ ಅವಕಾಶ, ಮಾರ್ಗದರ್ಶನ ಹಾಗೂ ಅಗತ್ಯ ಬೇಡಿಕೆಯ ವಿದ್ಯಾಭ್ಯಾಸ ಸಿಗುತ್ತಿಲ್ಲ ಎಂದ ಅವರು, ಪ್ರತಿಯೊಬ್ಬರಿಗೂ ತಾಂತ್ರಿಕ ಶಿಕ್ಷಣ ನೀಡಿದ್ದೇ ಆದರೆ ಭಾರತ ವಿಶ್ವದಲ್ಲೇ ಉನ್ನತ ಸ್ಥಾನವನ್ನು ತಲುಪುತ್ತದೆ ಎಂದು ವಿವರಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸುಮಾರು 800 ಕಾಲೇಜುಗಳು ಹಾಗೂ 4 ಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಏಷ್ಯಾದಲ್ಲೇ 1ನೇ ಸ್ಥಾನವನ್ನು ಗಳಿಸಿದೆ, ಆದರೆ ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳು ಹಣಮಾಡುವ ಉದ್ದೇಶವನ್ನು ಹೊಂದಿದ್ದು, ಅನೇಕ ಮಂದಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವುದು ವಿಪರ್ಯಾಸ ಎಂದರು.
ವಿ. ನಾರಾಯಣಸ್ವಾಮಿ, ಪ್ರೊ.ಸಿ. ಮದನ್ ಗ್ಗೋಪಾಲ್, ಮಾಲೂರಿನ ಸ.ಪ್ರ.ದ. ಡಾ. ಮುನಿನಾರಾಯಣಪ್ಪ, ಡಾ.ಸರ್ವಮಂಗಳ, ಜೆ.ಕೆ. ಸುಮಂಗಲ ಇದ್ದರು.