ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತಾಯಿ, ಮಗಳು ಆತ್ಮಹತ್ಯೆ ಯತ್ನ

Mainashree
Updated On : 27 Apr 2014, 12:11 pm

ಕೋಲಾರ/ಮುಳಬಾಗಿಲು: ಸಿಪಿಐ ಮುಖಂಡ ರಾಧಾಕೃಷ್ಣ ಕೊಲೆಯಾಗಿ ಇಪ್ಪತ್ತನಾಲ್ಕು ಗಂಟೆ ಕಳೆಯುವ ಮುನ್ನವೇ ಈತನ ಎಂಟು ವರ್ಷದ ಮಗಳು ವೈಷ್ಣವಿ ಬಾವಿಗೆ ಬಿದ್ದು ಸಾವನ್ನಪ್ಪಿರುವುದು ಸೂತಕದಲ್ಲಿ ಮುಳುಗಿದ್ದ ಅಸಲಿ ಅತ್ತಿಕುಂಟೆ ಗ್ರಾಮಕ್ಕೆ ಗರ ಬಡಿದಂತಾಗಿದೆ.
ಮುಳಬಾಗಿಲು ತಾಲೂಕಿನ ಅಸಲಿ ಅತ್ತಿಕುಂಟೆ ಗ್ರಾಮದ ನಿವಾಸಿ, ಸಿಪಿಐ ಮುಖಂಡ ರಾಧಾಕೃಷ್ಣರನ್ನು ಹಳೆ ವೈಷಮ್ಯದ ಹಿನ್ನಲೆಯಲ್ಲಿ ಇದೇ ಗ್ರಾಮದ ಶಿವಕುಮಾರ್ ಹಾಗೂ ಇತರರು ಕೆಜಿಎಫ್ ಬೈಪಾಸ್ ರಸ್ತೆಯ ಬಳಿ ಗುರುವಾರ ರಾತ್ರಿ ಕಲ್ಲಿನಿಂದ ತಲೆಗೆ ಜಜ್ಜಿ ಬರ್ಬರವಾಗಿ ಹತ್ಯೆಗೈದಿದ್ದರು.
ಪತಿಯ ಅಂತ್ಯ ಸಂಸ್ಕಾರ ಗ್ರಾಮದಲ್ಲಿ ಶುಕ್ರವಾರ ನಡೆದಿತ್ತು. ರಾಧಾಕೃಷ್ಣ ಮಗ ಭರತ್ (10)ನನ್ನು ಅಜ್ಜಿಯ ಮನೆಗೆ ಕರೆದೊಯ್ಯಲಾಗಿತ್ತು. ಮನೆಯಲ್ಲಿ ಪತ್ನಿ ಸುಮಾ ಹಾಗೂ ಮಗಳು ವೈಷ್ಣವಿ ಇತರರು ಇದ್ದರು.
ಪತಿಯ ಸಾವಿನಿಂದ ದುಃಖ ತಪ್ತಳಾಗಿದ್ದ ಸುಮಾ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಮಗಳು ವೈಷ್ಣವಿಯೊಂದಿಗೆ ಮನೆಯಿಂದ ಹೊರ ಬಂದು ಗ್ರಾಮದ ಸಮೀಪದಲ್ಲಿರುವ ಕೆಇಬಿ ಕೃಷ್ಣಪ್ಪ ಎಂಬುವರಿಗೆ ಸೇರಿದ ತೆರೆದ ಬಾವಿಯಲ್ಲಿ ಮಗಳೊಂದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಮನೆಯಿಂದ ರಾತ್ರಿ ಹೊರಗೆ ಹೋದ ಸುಮಾ ವಾಪಸ್ ಬರದಿರುವುದನ್ನು ಗಮನಿಸಿದ ಬಂಧುಗಳು ಹುಡುಕಾಡುತ್ತಿದ್ದಾಗ ಸುಮಾ ಮತ್ತು ಮಗಳು ವೈಷ್ಣವಿ ಬಾವಿಗೆ ಬಿದ್ದಿರುವುದು ತಿಳಿದು ರಕ್ಷಣೆಗಾಗಿ ಬಾವಿಯಲ್ಲಿ ದುಮುಕಿ ಇಬ್ಬರನ್ನು ನೀರಿನಿಂದ ಹೊರ ತೆಗೆದಾಗ ವೈಷ್ಣವಿ ಮೃತಪಟ್ಟಿದ್ದಳು. ನೀರು ಕುಡಿದು ಸಾವು ಬದುಕಿನ ನಡುವೆ ನರಳುತ್ತಿದ್ದ ಸುಮಾ ಅವರನ್ನು ತಕ್ಷಣ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಸಾಗಿಸಿದ್ದರಿಂದ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಚಿಕಿತ್ಸೆಯಿಂದ ಚೇತರಿಸಿಕೊಂಡ ಸುಮಾ ಮಗಳು ಸತ್ತಿರುವ ವಿಚಾರ ಗೊತ್ತಾಗಿ ಆಸ್ಪತ್ರೆಯಿಂದ ಬಿಡುಗಡೆ ಪಡೆದು ಮಗಳ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು. ಸುಮಾ ಜೊತೆ ಮಗ ಭರತ್ ಇದ್ದಿದ್ದರೆ ಅವನ ಪ್ರಾಣಕ್ಕೂ ಕುತ್ತು ಬರುತ್ತಿತ್ತೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪ್ರಕರಣ ಮುಳಬಾಗಲು ಠಾಣೆಯಲ್ಲಿ ದಾಖಲಾಗಿದೆ. ರಾಧಾಕೃಷ್ಣ ಕೊಲೆಯಿಂದಾಗಿ ಅಸಲಿ ಅತ್ತಿಕುಂಟೆಯಲ್ಲಿ ಸ್ಮಶಾನ ಮೌನ ಅವರಿಸಿದೆ. ಗಂಡನ ಸಾವಿನಿಂದ ದೃತಿಗೆಟ್ಟು ಆತ್ಮಹತ್ಯೆಗೆ ಯತ್ನಿ ಬಚಾವ್ ಆಗಿರುವ ಸುಮಾ ಈಗ ಪುತ್ರಿಯ ಅಗಲಿಕೆಯಿಂದ ಮತ್ತಷ್ಟು ಕುಗ್ಗಿದ್ದಾರೆ. ಸಾವಿನ ಮನೆಯಲ್ಲಿ ಅರಣ್ಯ ರೋಧನ ಮುಂದುವರೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement