ನೀರಿನ ಸಮಸ್ಯೆಗೆ ಕ್ರಮ ಅಗತ್ಯ
ಕ.ಪ್ರ.ವಾರ್ತೆ | ಮಧುಗಿರಿ |ಏ.27
ತಾಲೂಕಿನಾದ್ಯಂತ ಬೇಸಿಗೆ ರಣ ಬಿಸಿಲ ತಾಪ ಏರುತ್ತಿದ್ದು ಸುರಿಯುತ್ತಿರುವ ಬೆವರು-ಬಾಯಾರಿಕೆ ತಣಿಸಿಕೊಳ್ಳಲು ಜನ ಪರದಾಡುವ ಜೊತೆಗೆ ಕಬ್ಬಿನ ಹಾಲು, ಜ್ಯೂಸ್, ಕಲ್ಲಂಗಡಿ ಹಣ್ಣುಗಳತ್ತ ಮೊರೆ ಹೋಗುತ್ತಿದ್ದಾರೆ.
ತಾಲೂಕು ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಬರ ಪೀಡಿತ ಪ್ರದೇಶ. ತಾಲೂಕಿನಲ್ಲಿ ನದಿ ಮೂಲಗಳಿಲ್ಲ. ಮಳೆಯಾಶ್ರಿತ ಬೆಳೆ ಬೆಳೆದು ಈ ಭಾಗದ ಜನ ಜೀವನ ನಡೆಸಬೇಕು. ಈವರೆಗೂ ಮಳೆ ಬಿದ್ದಿಲ್ಲ. ಸುಡು ಬಿಸಿಲು. ಮಧುಗಿರಿ ಏಕಶಿಲಾ ಬೆಟ್ಟದ ಹೆಬ್ಬಂಡೆ ಕಾವು ಜನರನ್ನು ಹೈರಾಣಗೊಳಿಸುತ್ತಿದೆ. ಬೆಳಿಗ್ಗೆಯಿಂದಲೇ ಎಲ್ಲಿ ನೋಡಿದರೂ ಕೊತ ಕೊತ ಕುದಿಯುವಂಥ ಬೇಸಿಗೆ ಬಿಸಿಲು ತಲ್ಲಣಗೊಳಿಸುತ್ತಿದ್ದು ತಣ್ಣನೇ ಗಾಳಿಯ ಸುಳಿವೇ ಇಲ್ಲವಾಗಿದೆ.
ಶುದ್ಧ ಕುಡಿವ ನೀರಿಲ್ಲ ಬಿಸಿಲ ಪ್ರಖರತೆ ಹೆಚ್ಚಿದಂತೆಲ್ಲ ಅಂತರ್ಜಲ ಪಾತಳ ಸೇರುತ್ತಿದು,್ದ ಇದೇ ಸ್ಥಿತಿ ಮುಂದುವರಿದರೆ ಕುಡಿವ ನೀರಿನ ಸಮಸ್ಯೆ ತಾರಕಕ್ಕೇರುವ ಲಕ್ಷಣಗಳು ಕಂಡು ಬರುತ್ತಿದೆ.
ಹೇಮೆ ನೀರು: ಶಾಸಕ ಕೆ.ಎನ್.ರಾಜಣ್ಣ ಅವರು ಮುತುವರ್ಜಿ ವಹಿಸಿ ಕಳೆದ ಮಳೆಗಾಲದ ಅವಧಿಯಲ್ಲಿ ಹೇಮಾವತಿ ನೀರನ್ನು ಸಮೀಪದ ಸಿದ್ದಾಪುರ ಕೆರೆಗೆ ಹರಿಸಿದ್ದರಿಂದ ಪಟ್ಟಣದ ಜನತೆಗೆ ನೀರಿನ ಬಿಸಿ ಇನ್ನು ತಟ್ಟಿಲ್ಲ. ಮುಂದಿನ ದಿನಗಳಲ್ಲಿ ಮಳೆ ಬೀಳದಿದ್ದರೆ ನೀರಿನ ಸಮಸ್ಯೆ ಎದುರಾಗುವುದರಲ್ಲಿ ಅನುಮಾನವಿಲ್ಲ.