ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ

Mainashree
Updated On : 27 Apr 2014, 12:12 pm

ಕೋಲಾರ: ಪಶುಗಳಿಗೂ ಮನುಷ್ಯರಂತೆ ಜೀವಿಸುವ ಹಕ್ಕಿದೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ. 2001ರಲ್ಲೇ ವಿಶ್ವ ಪಶು ವೈದ್ಯಕೀಯ ಸಂಘ, ವಿಶ್ವ ಸಂಸ್ಥೆ ಹಾಗೂ ಪ್ರಾಣಿ ಆರೋಗ್ಯ ಸಂಸ್ಥೆ ಪಶು ದಿನಾಚರಣೆಯನ್ನು ಅನುಷ್ಠಾನಕ್ಕೆ ತಂದಿದ್ದು ಕರ್ನಾಟಕದಲ್ಲಿ 2005ರಿಂದ ಪಶು ವೈದ್ಯಕೀಯ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಪಶು ವೈದ್ಯಕೀಯ ಪರಿಷತ್ತಿನ ನಿರ್ದೇಶಕ ಡಾ.ರಘುರಾಮೇಗೌಡ ತಿಳಿಸಿದರು.
ನಗರದ ಪಶು ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಪಶುವೈದ್ಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿ, ಬರಗಾಲದಲ್ಲೂ ಆರ್ಥಿಕಾಭಿವೃದ್ಧಿಗೆ ದಾರಿ ತೋರುವ ಮತ್ತು  ಜೀವನಕ್ಕೆ ಆಸರೆಯಾಗಿರುವ ಪಶುಪಾಲನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದರು.ಪಶುಗಳ ಆರೋಗ್ಯ ರಕ್ಷಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕು, ನಮ್ಮ ಆದ್ಯತೆಗಳ ಕೊರತೆಯಿದ್ದರೂ, ಇರುವ ಸಲಕರಣೆ, ಸೌಲಭ್ಯಗಳಲ್ಲೇ ಉತ್ತಮ ಚಿಕಿತ್ಸೆ ನೀಡಬೇಕೆಂದು ಕಿವಿಮಾತು ಹೇಳಿದರು. ದೇಶವನ್ನು ಬಡತನ, ಬರಗಾಲ ಕಾಡುತ್ತಿದ್ದರೂ, ಪಶುಪಾಲನೆ ಈ ಸಮಸ್ಯೆಗಳ ನಿವಾರಣೆಗೆ ದಾರಿದೀಪವಾಗಿದೆ, ಇದಕ್ಕೆ ಚ್ಯುತಿ ಬಾರದಂತೆ ಪಶುಗಳ ಪಾಲನೆಯನ್ನು ಆಧುನಿಕತೆ, ಶುಭ್ರತೆ, ಆರೋಗ್ಯ ನಿರ್ವಹಣೆ ಹೆಚ್ಚು ಮುಖ್ಯವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ವನ್ಯ ಮೃಗಗಳ ರಕ್ಷಣೆಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ಮನೆಯಲ್ಲಿ ಸಾಗುವ ಮತ್ತು ನಮ್ಮ ಜೀವನಾಧಾರವಾದ ಪಶುಗಳಿಗೆ ನೀಡುತ್ತಿಲ್ಲ ಎಂದು ವಿಷಾಧಿಸಿದ ಅವರು, ಸಾಕಾಣಿಕೆಯಲ್ಲಿ ಹೆಚ್ಚು, ಆಧುನಿಕತೆ ಅಳವಡಿಸಿಕೊಳ್ಳಬೇಕೆಂದರು.
ಕೋಲಾರ ಜಿಲ್ಲೆ ಹಾಲಿನ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಗಳಿಸಿದೆ, ಹೈನುಗಾರಿಕೆ ಇಂದು ಇಲ್ಲಿನ ಜನರ ಬದುಕಾಗಿದೆ, ಜತೆಗೆ ಕೋಳಿಸಾಕಾಣಿಕೆ, ಹಂದಿ, ಮೊಲ, ಕುರಿ ಸಾಕಾಣಿಕೆಗೂ ಒತ್ತು ನೀಡುವ ಮೂಲಕ ಆರ್ಥ್ಥಿಕಾಭಿವೃದ್ಧಿಗೆ ದಾರಿ ಹುಡುಕಿಕೊಳ್ಳುವ ಯತ್ನ ಸಾಗಿದೆ ಎಂದರು.
ಆರ್ಥಿಕಾಭಿವೃದ್ಧಿಯಲ್ಲಿ ಪಶುಗಳು ಪ್ರಾಮುಖ್ಯತೆ ವಹಿಸಿರುವುದರಿಂದ ಅವುಗಳ ಆರೋಗ್ಯ ರಕ್ಷಣೆಯೂ ಅಷ್ಟೇ ಜಟಿಲಗೊಳ್ಳುತ್ತಿದ್ದು, ಹೆಚ್ಚಿನ ಪಶುವೈದ್ಯಕೀಯ ಸೌಲಭ್ಯಗಳ ಅಭಿವೃದ್ಧಿ, ತಾಂತ್ರಿಕತೆಯ ಅರಿವು ಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ. ಶಿವರಾಮ್ ವಹಿಸಿದ್ದರು. ಉಪನಿರ್ದೇಶಕ ಡಾ.ಬಿ.ಎಸ್. ಜಯರಾಮ್, ಮುನಿನಾರಾಯಣ, ಡಾ. ಷಪೀವುಲ್ಲ, ಅಫ್‌ಜಲ್, ಡಾ. ಚನ್ನಕೇಶು, ವೆಂಕಟರಾಮ್, ತ್ರಿಮೂರ್ತಿನಾಯಕ್ ಇದ್ದರು. ಪಶು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗೌನಪಲ್ಲಿಯ ಡಾ. ರವಿ, ಮುಡಿಯನೂರಿನ ಡಾ. ರಾಮಯ್ಯ, ಬೇತಮಂಗಲದ ಡಾ. ತ್ರಿಮೂರ್ತಿ ನಾಯಕ್ ಹಾಗೂ ಬಂಗಾರೇಪಟೆಯ ಡಾ. ವೆಂಕಟರಾಂ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement