ಮಾಹಿತಿ ನೀಡುವಲ್ಲಿ ಪುರಸಭೆ ಮುಖ್ಯ ಅಧಿಕಾರಿ ವಿಫಲ: ರು. 5 ಸಾವಿರ ದಂಡ
ಕುಣಿಗಲ್: ಸಾರ್ವಜನಿಕರೊಬ್ಬರು ಕೇಳಿದ ಮಾಹಿತಿಯನ್ನು ಸಕಾಲದೊಳಗೆ ನೀಡುವಲ್ಲಿ ವಿಫಲರಾದ ಕುಣಿಗಲ್ ಪುರಸಭೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆದ ಪುರಸಭೆ ಮುಖ್ಯಾಧಿಕಾರಿ ಅನ್ನದಾನಿಯವರಿಗೆ ರಾಜ್ಯ ಮಾಹಿತಿ ಆಯೋಗದ ಮುಖ್ಯಮಾಹಿತಿ ಆಯುಕ್ತರು ಐದುಸಾವಿರ ರು. ದಂಡ ವಿಧಿಸಿದ್ದಾರೆ.
ಪುರಸಭೆಯಲ್ಲಿ 2010-11 ರಿಂದ 2012-13ನೇ ಸಾಲಿಗೆ, ರಾಜ್ಯ ಸರ್ಕಾರದ ವಿವಿಧ ಅನುದಾನಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕೆ ವಿನಿಯೋಗಿಸಿರುವ ಅನುದಾನಗಳ ಬಗ್ಗೆ ಶಿವಲಿಂಗಯ್ಯ ಎಂಬುವವರು 10-8 -2012ರಲ್ಲಿ ಮಾಹಿತಿ ಹಕ್ಕಿನಡಿಯಲ್ಲಿ ಮನವಿ ಸಲ್ಲಿಸಿದ್ದರು. ನಿಗದಿತ ಅವಧಿಯೊಳಗೆ ಪುರಸಭೆ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಮುಖ್ಯಾಧಿಕಾರಿ ಮಾಹಿತಿ ನೀಡದ ಕಾರಣ, ಶಿವಲಿಂಗಯ್ಯ ಪ್ರಥಮ ಮೇಲ್ಮನವಿ ಅಧಿಕಾರಿಗಳಾದ ನಗರ ಯೋಜನಾ ನಿರ್ದೇಶಕರಿಗೆ 29-9-2012 ರಲ್ಲಿ ಮೇಲ್ಮನವಿ ಸಲ್ಲಿಸಿದ್ದರೂ ಕೂಡ ಮಾಹಿತಿ ನೀಡದ ಕಾರಣ ರಾಜ್ಯಮಾಹಿತಿ ಆಯೋಗಕ್ಕೆ 3-6-2013 ರಂದು ದೂರುಸಲ್ಲಿಸಿದ ಮೇರೆಗೆ, ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರು, ಪ್ರಕರಣವನ್ನು ವಿಚಾರಣೆಗೆ ಕೈಗೊಂಡು 2-12-2013ರಲ್ಲಿ ಮಾಹಿತಿ ನೀಡುವಂತೆ ನೋಟಿಸ್ ಜಾರಿ ಮಾಡಿ ಹಲವು ಬಾರಿ ವಿಚಾರಣೆ ನಡೆಸಿದರೂ ಕೋರಿರುವ ಪೂರ್ಣ ಮಾಹಿತಿ ನೀಡುವಲ್ಲಿ ಮತ್ತು ಲಿಖಿತ ಕಾರಣಗಳನ್ನು ಸಲ್ಲಿಸದ ಕಾರಣ, ಪುರಸಭೆ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆದ ಮುಖ್ಯಾಧಿಕಾರಿ ಅನ್ನದಾನಿಯವರಿಗೆ ಐದುಸಾವಿರ ರು.ದಂಡ ವಿಧಿಸಿ ರಾಜ್ಯ ಮುಖ್ಯಮಾಹಿತಿ ಆಯುಕ್ತರಾದ ಎ.ಕೆ.ಎಂ.ನಾಯಕ್ ಆದೇಶಿಸಿದ್ದಾರೆ.