ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಂಪತ್ತು ಕೆಲವರ ಪಾಲು: ನಿವಾರಣೆಯಾಗದ ಬಡತನ

Mainashree
Updated On : 27 Apr 2014, 12:11 pm

ಕೋಲಾರ: ಮಕ್ಕಳ ಅಪೌಷ್ಟಿಕತೆಗೆ ಬಡತನವೇ ಕಾರಣ, ಭಾರತ ಆರ್ಥಿಕವಾಗಿ, ವೈಜ್ಞಾನಿಕವಾಗಿ ಪ್ರಗತಿ ಸಾಧಿಸುತ್ತಿದೆಯಾದರೂ ದೇಶದ ಸಂಪತ್ತು ಕೆಲವೇ ಜನರ ಪಾಲಾಗಿರುವುದರಿಂದ ಬಡತನ ನಿವಾರಣೆ ಸಾಧ್ಯವಾಗುತ್ತಿಲ್ಲವೆಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎನ್. ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರ ನಗರದ ಜಿಪಂ ಸಭಾಂಗಣದಲ್ಲಿ ಅಪೌಷ್ಟಿಕತೆ ತಡೆಗಟ್ಟುವಿಕೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ವಿಶ್ವದಲ್ಲಿ ಅಪೌಷ್ಟಿಕತೆಯಿಂದ ಪ್ರತಿನಿತ್ಯ ಸಾಯುತ್ತಿರುವ ಪ್ರತಿ ಮೂರು ಮಕ್ಕಳಲ್ಲಿ ಒಂದು ಭಾರತದ್ದಾಗಿರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕೋಲಾರ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಡಾ. ಜವಾದ್ ರಹೀಂ ಮಾತನಾಡಿ, ಮಾನವನ ಸಲುವಾಗಿ ಜಾರಿಗೆ ತಂದಿರುವ ಮಾನವ ಹಕ್ಕುಗಳ ಉಲ್ಲಂಘನೆ ಮಾನವರಿಂದಲೇ ಆಗುತ್ತಿದೆ, ಬಾಲ್ಯ ವಿವಾಹ ಪದ್ಧತಿ ತಪ್ಪು ಎಂಬುದು ಗೊತ್ತಿದ್ದರೂ ಅನೇಕರು ತಮ್ಮ ಮಕ್ಕಳಿಗೆ ಅಪ್ರಾಪ್ತ ವಯಸ್ಸಿನಲ್ಲೇ ಮದುವೆ ಮಾಡಿ ಮಕ್ಕಳನ್ನು ಹೆರುವ ಯಂತ್ರಗಳನ್ನಾಗಿ ಪರಿಗಣಿಸುತ್ತಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಿ.ಕೆ. ರವಿ, ಅಪೌಷ್ಠಿತಕೆ ನಿವಾರಣೆಗಾಗಿ ಜಿಲ್ಲಾಡಳಿತ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಅಪೌಷ್ಟಿಕತೆ ಸಮಸ್ಯೆ ನಿವಾರಣೆ ಅತಿ ಮುಖ್ಯ. ಹಾಗಾಗಿ ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳನ್ನು ಸಶಕ್ತಗೊಳಿಸಲಾಗುತ್ತಿದೆ. ಖಾಲಿ ಇದ್ದ ಅಂಗನವಾಡಿ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈಗಾಗಲೇ 238 ಜನರನ್ನು ನೇಮಕ ಮಾಡಲಾಗಿದ್ದು ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ 277 ಮಂದಿ ಆಯ್ಕೆ ಪ್ರಕ್ರಿಯೆ ನಿಂತಿದ್ದು, ಚುನಾವಣೆ ಮುಗಿದ ಮೇಲೆ ಬಾಕಿ ಹುದ್ದೆಗಳನ್ನು ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಿ ಕ್ರಮಬದ್ಧವಾಗಿ ಭರ್ತಿ ಮಾಡಲಾಗುತ್ತದೆ ಎಂದು ವಿವರಿಸಿದರು. 6 ತಿಂಗಳ ಮಗುವಿನಿಂದ 6 ವರ್ಷದ ಮಕ್ಕಳಿಗೆ ಸಮತೋಲನ ಆಹಾರ ನೀಡಲಾಗುತ್ತಿದೆ, ಮಕ್ಕಳಿಗೆ ವೈದ್ಯಕೀಯ ಸೇವೆ, ತಾಯಂದಿರ ಆರೋಗ್ಯದ ಬಗ್ಗೆ ಗಮನ, ಅಪೌಷ್ಟಿಕತೆ ನಿವಾರಣೆಗಾಗಿ ಜಿಲ್ಲೆ ಆಸ್ಪತ್ರೆಯಲ್ಲಿ ಕೇಂದ್ರ ತರೆಯಲಾಗಿದೆಯಲ್ಲದೆ, ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement