ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹ
ಕ.ಪ್ರ. ವಾರ್ತೆ ್ಣ ಕೋಲಾರ ್ಣ ಏ.28
ಮುಳಬಾಗಿಲು ತಾಲೂಕಿನ ಅಸಲಿ ಅತ್ತಿಕುಂಟೆ ಗ್ರಾಮದ ನಿವಾಸಿ, ಸಿಪಿಐ ಮುಖಂಡ ರಾಧಾಕೃಷ್ಣ ಹತ್ಯೆಯಾಗಿ ನಾಲ್ಕು ದಿನಗಳಾದರೂ ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.
ನಗರದ ನಚಿಕೇತನ ನಿಲಯದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆಕಾರರು ಮೆರವಣಿಗೆ ನಡೆಸಿದರು. ರಾಧಾಕೃಷ್ಣ ಅವರ ಪತ್ನಿ ಸುಮಾ ಅವರಿಗೆ ಸರ್ಕಾರಿ ನೌಕರಿ ನೀಡಬೇಕು. ಪುತ್ರ ಭರತ್ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಅಲ್ಲದೆ, ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದರು.
ಎಡಿಸಿ ವಿರುದ್ಧ ಆಕ್ರೋಶ: ಮನವಿ ಸ್ವೀಕರಿಸಲು ಆಗಮಿಸಿದ ಅಪರ ಜಿಲ್ಲಾಧಿಕಾರಿ ನವೀನಕುಮಾರ್ ರಾಜ್ ಅವರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಘಟನೆ ನಡೆದು ನಾಲ್ಕು ದಿನಗಳಾದರೂ ಯಾವುದೇ ಉನ್ನತ ಮಟ್ಟದ ಅಧಿಕಾರಿಯಾಗಲಿ, ಸಚಿವರಾಗಲಿ ಅತ್ತಿಕುಂಟೆ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಜಿಲ್ಲಾಧಿಕಾರಗಳೇ ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಜಿಲ್ಲಾ ಎಸ್ಪಿ ಅಜಯ್ ಹಿಲೋರಿ ಭೇಟಿ ನೀಡಿ, ಆರೋಪಿಗಳು ನಾಪತ್ತೆಯಾಗಿದ್ದಾರೆ. ಅವರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಶೀಘ್ರವೇ ಬಂಧಿಸುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದರಾದರೂ, ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಮತ್ತೆ ಅಲ್ಲಿಂದ ನಿರ್ಗಮಿಸಿದರು. ಜಿಪಂ ಸದಸ್ಯೆ ಮಂಗಮ್ಮ ಮುನಿಸ್ವಾಮಿ, ವೆಂಕಟೇಶ್ ಮೌರ್ಯ, ಶ್ರೀಕೃಷ್ಣ, ಗಣೇಶ್, ಲಕ್ಷ್ಮೀಸಾಗರ ಮುನಿರಾಜು, ಚಲುವನಹಳ್ಳಿ ಕೆ.ಶ್ರೀನಿವಾಸ್, ಸಿ.ವಿ.ಗೋಪಾಲ್, ಶಂಕರಪ್ಪ, ಕರಡುಬಂಡೆ ಮುನಿರಾಜು, ಹರಟಿ ವೆಂಕಟರಾಮ್, ವಿಜಯಕುಮಾರ್, ವರದೇನಹಳ್ಳಿ ವೆಂಕಟೇಶ್ ಇನ್ನಿತರರು ಇದ್ದರು.
ಆರೋಪಿಗಳು ನಾಪತ್ತೆಯಾಗಿದ್ದಾರೆ. ಅವರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಶೀಘ್ರವೇ ಬಂಧಿಸುತ್ತೇವೆ
ಟಿ ಅಜಯ್ ಹಿಲೋರಿ, ಜಿಲ್ಲಾ ಎಸ್ಪಿ