ಕೋಲಾರ: ನೀರಿನ ಸಭೆಗೆ 12 ಪುರಪಿತೃಗಳ ಗೈರು
ಕೋಲಾರ: ನಗರದಲ್ಲಿ ಉಲ್ಬಣಗೊಳ್ಳುತ್ತಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಕರೆದಿದ್ದ ಸಭೆಗೆ ನಗರಸಭೆಯ 12 ಮಂದಿ ಸದಸ್ಯರು ಗೈರು ಹಾಜರಾಗುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಗರಸಭೆ ಅಧ್ಯಕ್ಷ ಬಿ.ಎಂ. ಮುಬಾರಕ್ ಕರೆದಿದ್ದ ಸಭೆಯಲ್ಲಿ ಕುಡಿಯುವ ನೀರಿನ ವಿಚಾರವಾಗಿ ಗಂಭೀರ ಚರ್ಚೆ ನಡೆಯಿತು. ನಗರಸಭೆಗೆ ಆಯ್ಕೆಯಾಗಲು ಮತ ನೀಡಿದ ಜನರಿಗೆ ಒಂದಿಷ್ಟು ಸಾಂತ್ವನ ಹೇಳಬೇಕಾದ ಸದಸ್ಯರು ಗೈರು ಹಾಜರಾಗಿದ್ದು ಜನತೆಯ ಬಗ್ಗೆ ಈ ಸದಸ್ಯರಿಗೆ ಇರುವ ಅನಾಧಾರಣೆಗೆ ಸಾಕ್ಷಿಯಾಗಿತ್ತು.
ಸಭೆಯಲ್ಲಿ ಹಾಜರಿದ್ದ ಸದಸ್ಯರು ಬೇಸಿಗೆ ಹೆಚ್ಚಾಗುತ್ತಿರುವುದರಿಂದ ಏನಾದರೂ ಮಾಡಿ ಕುಡಿಯುವ ನೀರು ಕೊಡಿ, ಹೆಚ್ಚುವರಿ ಕೊಳವೆ ಬಾವಿ ಕೊರೆಯಿಸಿ-ಕೆಟ್ಟಿರುವವನ್ನು ದುರಸ್ತಿ ಮಾಡಿಸಿ, ಇನ್ನಷ್ಟು ಟ್ಯಾಂಕರ್ ನೀರು ಒದಗಿಸಿ ಎಂದು ಮನವಿ ಮಾಡಿದರು.
ತಾವು ಅಧಿಕಾರ ವಹಿಸಿಕೊಂಡ ಮೇಲೆ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ದೃತಿಗೆಡಬೇಕಾಗಿಲ್ಲ, ಏನೇ ಸಮಸ್ಯೆ ಬಂದರೂ ಸಾಮೂಹಿಕ ಜವಾಬ್ದಾರಿಯಿಂದ ಜನತೆ ದಾಹ ತೀರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸೋಣವೆಂದು ಮುಬಾರಕ್ ತಿಳಿಸಿದರು.
ಸದಸ್ಯರಾದ ವೆಂಕಟೇಶ್, ಪತಿ, ಗಾಂಧಿನಗರ ನಾರಾಯಣಸ್ವಾಮಿ, ಸೋಮಶೇಖರ್, ರಮೇಶ್, ಪ್ರಸಾಧ್ ಬಾಬು, ರವೀಂದ್ರ, ರಾಧಾಕೃಷ್ಣ, ಮುರಳಿಗೌಡ, ಅಪ್ರೋಜ್‌ಪಾಷ, ಶಂಷೀರ್ ತಮ್ಮ ವಾರ್ಡುಗಳಲ್ಲಿನ ಪರಿಸ್ಥಿತಿಯನ್ನು ಸಭೆಗೆ ವಿವರಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಸಾಕಮ್ಮ ರಾಜಣ್ಣ, ಆಯುಕ್ತ ಜಗದೀಶ್, ವ್ಯವಸ್ಥಾಪಕ ಶಿವಪ್ರಕಾಶ್, ಎಂಜನಿಯರ್ ಗಳಾದ ಕೊಟ್ರೇಶಪ್ಪ, ಶ್ರೀನಿವಾಸ್ ಇದ್ದರು.