ಪಿಡಿಒಗಳ ಮೇಲೆ ಹರಿಹಾಯ್ದ ಶಾಸಕ
ಬಂಗಾರಪೇಟೆ: ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಎಲ್ಲೆಡೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿ ಜನರು ತತ್ತರಿಸಿ ಹೋಗಿದ್ದರೂ ಅದಕ್ಕೆ ಸಮರ್ಪಕವಾಗಿ ಸ್ಪಂದಿಸದೆ ಪಂಚಾಯ್ತಿ ಪಿಡಿಒಗಳ ಬೇಜವಾಬ್ದಾರಿಯಿಂದ ಸಮಸ್ಯೆ ಮತ್ತಷ್ಟು ಜಟಿಲಗೊಳ್ಳುವಂತಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಪಿಡಿಒಗಳ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆಯಲು ಕರೆದಿದ್ದ ಪಿಡಿಒಗಳ ಸಭೆಯಲ್ಲಿ ಬೇಸಿಗೆಯಲ್ಲಿ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಬಂದಿದೆ ಜನರ ಜೊತೆ ಮೂಕ ಪ್ರಾಣಿಗಳಿಗೂ ಹನಿ ನೀರಿಲ್ಲದೆ ಪರಿತಪಿಸುವಂತಾಗಿದೆ. ಆದರೆ ಕೆಲ ಪಂಚಾಯ್ತಿ ಪಿಡಿಒಗಳು ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯಾವ ಗ್ರಾಮದಲ್ಲಿ ಏನು ಸಮಸ್ಯೆಯಿದೆ ಎಂಬುದು ಅಧಿಕಾರಿಗಳು ಶಾಸಕರ ಗಮನಕ್ಕೆ ತರುವುದಿಲ್ಲ ಗ್ರಾಮಸ್ಥರೇ ಬಂದು ವಿಷಯ ಹೇಳುವವರೆಗೂ ನೀವು ಮಾಹಿತಿ ನೀಡುವುದಿಲ್ಲ ಎಂದರೆ ನಿಮ್ಮ ಜವಾಬ್ದಾರಿ ಬಗ್ಗೆ ಅನುಮಾನ ಮೂಡುತ್ತದೆ.
ದಿಢೀರನೆ ಸಭೆ ಕರೆದಿದ್ದರಿಂದ ಕೆಲ ಪಿಡಿಒಗಳ ಬಳಿ ಸಮರ್ಪಕವಾದ ಮಾಹಿತಿ ಕೊರತೆ ಇದ್ದುದರಿಂದ ಮತ್ತೊಮ್ಮೆ ಸಭೆ ಕರೆಯುವೆ ಅಂದಿನ ಸಭೆಯಗೆ ಪಂಚಾಯ್ತಿಗೆ ಸಂಬಂಧಿಸಿದ ಗೋಮಾಳ ಜಾಗ ಎಷ್ಟಿದೆ, ಕಂದಾಯ ವಸೂಲಾತಿ ಬಗ್ಗೆ ಸೇರಿದಂತೆ ಇತರೇ ಎಲ್ಲಾ ಮಾಹಿತಿಯೂ ಕೊಡಬೇಕು. ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದರು. ಗ್ರಾಮಗಳಲ್ಲಿ ವಾಟರೆಮನ್ಗಳ ರಾಜಕೀಯದಿಂದ ನೀರು ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಕಡ್ಡಾಯವಾಗಿ ವಾರಕ್ಕೊಮ್ಮೆ ಅವರ ಸಭೆಯನ್ನು ಪಿಡಿಒಗಳು ಕರೆಯಬೇಕು ಮತ್ತು ಬರಗಾಲದಲ್ಲಿ ಕರ್ತವ್ಯ ನಿರ್ಲಕ್ಷ್ಯ ಧೋರಣೆ ಮಾಡದೆ ಮಾನವೀಯತೆಯಿಂದ ಎಲ್ಲಿಯೂ ನೀರಿನ ಸಮಸ್ಯೆ ಬಾರದಂತೆ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸೂಚನೆ ನೀಡಿದರು.