ಹಾಡಹಗಲೇ ಮಹಿಳೆ ಕೊಲೆ
ಕೆಜಿಎಫ್: ಹಳೇ ದ್ವೇಷದ ಹಿನ್ನೆಲೆಯಲ್ಲಿ ಹಾಡಹಗಲೇ ಮಹಿಳೆಯೊಬ್ಬಳನ್ನು ಮಾರಾಕಾಸ್ತ್ರಗಳ ಹಲ್ಲೆ ನಡೆಸಿ ಕೊಲೆಗೈದ ಘಟನೆ ಬೆಮಲ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ನ್ಯೂ ಮಾಡೆಲ್‌ಹೌಸ್ ಬಡಾವಣೆಯ ನಿವಾಸಿ ಸ್ವಾಮಿಕಣ್ಣನ್ ಎಂಬುವರ ಪತ್ನಿ ಅರುಳ್‌ಮಣಿ(53) ಕೊಲೆಯಾದವರು. ಸ್ವಾಮಿಕಣ್ಣನ್ ಕುಟುಂಬಕ್ಕೂ ಹಾಗೂ ಪಕ್ಕದ ಮನೆ ನಿವಾಸಿ, ಮಾಜಿ ನಗರಸಭೆ ಸದಸ್ಯೆ ಶಿವಗಾಮಿ ಕುಟುಂಬದ ಮಧ್ಯೆ ಹಳೇ ದ್ವೇಷವಿತ್ತು. ಆಗಾಗ ಜಗಳವಾಗುತ್ತಿತ್ತು. ಸೋಮವಾರವೂ ಎರಡು ಕುಟುಂಬಗಳ ಮಧ್ಯೆ ಜಗಳವಾಗಿದೆ. ಆಗ ಶಿವಾಗಾಮಿ ಅವರ ಪತಿ ಪೊನ್ನರಸನ್ ಹಾಗೂ ಅವರ ಪುತ್ರ ಶಿವಶಂಕರ್ ಅವರು ಅರುಳ್‌ಮಣಿ ತಲೆಗೆ ಕತ್ತಿ ಹಾಗೂ ರಾಡ್‌ನಿಂದ ಹೊಡೆದು ಕೊಲೆ ಮಾಡಿ, ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅರುಳ್‌ಮಣಿಯನ್ನು ಬೆಂಗಳೂರಿನ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದರು.
ಬೆಮಲ್‌ನಗರ ಪೊಲೀಸರು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿ, ಮುಂದಿನ ಕ್ರಮಕೈಗೊಂಡಿದ್ದಾರೆ. ಘಟನಾ ಸ್ಥಳಖ್ಕೆ ಎಸ್‌ಪಿ ಅಜಯ್ ಹಿಲೋರಿ, ಡಿವೈಎಸ್‌ಪಿ ಎ.ಕೆ.ವಿವೇಕಾನಂದ, ಇನ್ಸ್‌ಪೆಕ್ಟರ್ ಪವನಕುಮಾರ್, ಪಿಎಸ್‌ಐ ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದರು.