ಹೈಬ್ರೀಡ್ ಕಾರ್ ಅವಿಷ್ಕಾರ
ಕ.ಪ್ರ.ವಾರ್ತೆ ಕೋಲಾರ ಏ.28
ಇಂಧನ ಹಾಗೂ ಬ್ಯಾಟರಿ ಚಾಲಿತ ವಾಹನಗಳನ್ನು ನೋಡಿದ್ದೀರಿ. ಆದರೆ, ಕೋಲಾರದ ಸಿಬಿಐಟಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೋಲಾರ್ ಮತ್ತು ಗಾಳಿಯ ಒತ್ತಡದಿಂದ ಚಲಿಸುವ ಹೈಬ್ರೀಡ್ ಎಲೆಕ್ಟ್ರಿಕಲ್ ಕಾರ್ ಅಭಿವೃದ್ಧಿಪಡಿಸಿದ್ದಾರೆ.
ಸಿ.ಬೈರೇಗೌಡ ತಾಂತ್ರಿಕ ಮಹಾ ವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಶರತ್‌ಚಂದ್ರ, ಗಣೇಶ್‌ಗೌಡ, ಹರೀಶ್‌ಗೌಡ, ಅಜಯ್‌ವರ್ಧನ್, ಕೌಶಿಕ್ ಮುಂತಾದವರು ಈ ಕಾರನ್ನು ತಯಾರಿಸಿದ್ದಾರೆ.
ಈ ಕಾರಿಗೆ ಸೋಲಾರ್ ಸಿಸ್ಟಮ್ ಅಳವಡಿಸಲಾಗಿದೆ. ಸೌರಶಕ್ತಿಯನ್ನು ಇಂಧನವಾಗಿ ಬಳಸಿಕೊಳ್ಳಲಾಗುತ್ತದೆ. ಚಾಲನೆಯ ಸಂದರ್ಭದಲ್ಲಿ ಕಾರು ಗಾಳಿಯನ್ನೇ ಇಂಧನ ರೀತಿಯಲ್ಲಿ ಬಳಸಿಕೊಳ್ಳುತ್ತದೆ ಎಂಬದೇ ಗಮನಾರ್ಹ ಸಂಗತಿ. ಇದಕ್ಕಾಗಿ ಕಾರಿಗೆ ವೇಗವಾಗಿ ಬೀಸುವ ಗಾಳಿಯ ಒತ್ತಡ ನಿರ್ಮಾಣ ಮಾಡಲು ಮುಂಭಾಗದಲ್ಲಿ ಫ್ಯಾನ್ ಅಳವಡಿಸಲಾಗಿದೆ. ಇದರ ಸಹಾಯದಿಂದಲೂ ಬ್ಯಾಟರಿ ಚಾರ್ಚ್ ಆಗಿ ವಾಹನ ಚಾಲನೆಯಾಗುವಂತೆ ಮಾಡುವ ಪ್ರಯತ್ನ ಇಲ್ಲಿದೆ. ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಈ ಕಾರಿಗೆ ಮಾರುತಿ ಕಾರಿನ ಸ್ಟೀರಿಂಗ್ ಸಿಸ್ಟಮ್, ಹಿರೋ ಎಲೆಕ್ಟಿಕ್ಲ್ ಬೈಕ್‌ನ ಮೋಟರ್ ಮತ್ತು ವಿದ್ಯುತ್‌ಕೋಶ ಸೇರಿದಂತೆ ಬೇರೆ ಬೇರೆ ವಾಹನಗಳ ಬಿಡಿ ಭಾಗಗಳನ್ನು ಬಳಸಲಾಗಿದೆ. ಸೋಲಾರ್ ಪವರ್‌ನಿಂದ ಚಾಲನೆಯಾಗುವ ಈ ಕಾರಿಗೆ ಹೈಬ್ರೀಡ್ ಎಲೆಕ್ಟ್ರಿಕಲ್ ಕಾರ್ ಎಂದು ಹೆಸರಿಟ್ಟಿದ್ದಾರೆ. ಇದು 30ರಿಂದ 35 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. 37 ದಿನಗಳಲ್ಲಿ ಕಾರ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, 70 ಸಾವಿರ ಖರ್ಚು ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.