ಅಹವಾಲು ಸಭೆಯಲ್ಲೂ ನೀರೇ!
ಚಿಕ್ಕಬಳ್ಳಾಪುರ: ತಾಲೂಕಿನ ಜಿ.ಗೊಲ್ಲಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಶಾಸಕ ಕೆ.ಸುಧಾಕರ್ ಅವರ ಧ್ಯಕ್ಷತೆಯ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲೂ ನೀರಿನ ಸಮಸ್ಯೆ ಪ್ರತಿಧ್ವನಿಸಿತು.
ಪಡಿತರ ಚೀಟಿ ವಿತರಣೆ, ಹದಗೆಟ್ಟ ರಸ್ತೆ ಸರಿಪಡಿಸುವುದು, ಮಾಸಾಶನ ಒದಗಿಸುವುದು ಸೇರಿದಂತೆ ಮತ್ತಿತರೆ ಸೌಲಭ್ಯಗಳಿಗೆ ಗ್ರಾಮಸ್ಥರು ಅರ್ಜಿಗಳು ಸ್ವೀಕೃತವಾದರೂ, ಕುಡಿಯುವ ನೀರಿನ ಸಮಸ್ಯೆಯೇ ಬಹುತೇಕ ಹೆಚ್ಚಿನ ಚರ್ಚೆಗೆ ಗುರಿಯಾಯಿತು.
ಕುಡಿಯುವ ನೀರಿನ ಸಮಸ್ಯೆಯಿಂದ ತೀವ್ರ ತೊಂದರೆಯನ್ನು ಅನುಭವಿಸಬೇಕಾಗಿದೆ. ಇದೊಂದೇ ಗ್ರಾಮದಲ್ಲಿ ಮಾತ್ರವಲ್ಲ. ಸುತ್ತಮುತ್ತಲಿನ ಗ್ರಾಮಗಳಲ್ಲೂ ಇದೇ ಕತೆಯಾಗಿದೆ. ಸಂಬಂಧಪಟ್ಟವರಿಗೆ ಸಮಸ್ಯೆಯ ಬಗ್ಗೆ ಹೇಳಿ ಹೇಳಿ ಸಾಕಾಗಿದೆ. ಆದರೆ, ಅವರು ನಮ್ಮ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಈಗಲಾದರೂ ಸಹ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ನೀರನ್ನು ಸರಬರಾಜು ಮಾಡಬೇಕು. ಇದಕ್ಕೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ನಮ್ಮ ಕಷ್ಟ ಇನ್ನೂ ಹೆಚ್ಚಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಸುಧಾಕರ್, 'ಕುಡಿಯುವ ನೀರಿನ ಸಮಸ್ಯೆಯೇ ಗಂಭೀರವಾಗಿದೆ. ಇದನ್ನು ಬಗೆಹರಿಸುವ ಸಲುವಾಗಿ ಕೊಳವೆ ಬಾವಿ ಕೊರೆಸುತ್ತಿದ್ದರೂ ಸಹ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಹೀಗಿದ್ದಾಗ್ಯೂ, ಸರ್ಕಾರದಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಅಗತ್ಯವಿರುವ ಅನುದಾನ ಬಿಡುಗಡೆಯಾಗಿದೆ. ಹಣಕ್ಕೇನು ಸಮಸ್ಯೆಯಿಲ್ಲ' ಎಂದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳ ಸಭೆಯನ್ನು ನಡೆಸಿ ಚರ್ಚಿಸಲಾಗಿದೆ. ಸಮಸ್ಯೆ ಇರುವ ಗ್ರಾಮಗಳಲ್ಲಿ ತಕ್ಷಣಕ್ಕೆ ಕೊಳವೆ ಬಾವಿಗಳನ್ನು ಕೊರೆಸಿ ನೀರನ್ನು ಸರಬರಾಜು ಮಾಡಬೇಕು. ಒಂದು ವೇಳೆ ಕೊಳವೆ ಬಾವಿಗಳು ವಿಫಲವಾದಾಗ ಟ್ಯಾಂಕರ್ಗಳ ಮೂಲಕ ನೀರನ್ನು ಒದಗಿಸಲು ಸೂಚನೆ ನೀಡಲಾಗಿದೆ ಎಂದರು. ಪಡಿತರ ಚೀಟಿ ವಿತರಣೆಯಲ್ಲಿ ಅವ್ಯವಹಾರ ನಡೆಯುತ್ತಿದ್ದು ದಲ್ಲಾಳಿಗಳು 300 ರೂಗಳನ್ನು ತೆಗೆದುಕೊಂಡು ಪಡಿತರ ಚೀಟಿಯನ್ನು ಕೊಡುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪ ಸಭೆಯಲ್ಲಿ ಕೇಳಿ ಬಂತು. ಸಭೆಯಲ್ಲಿ ತಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಓಬಳೇಶ್, ಕಾರ್ಯ ನಿರ್ವಹಣಾಧಿಕಾರಿ ಶಂಕರ್, ಗ್ರಾಪಂ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ಮುಂತಾದವರು ಉಪಸ್ಥಿತರಿದ್ದರು.