ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜನ ಕಡಿದು ಹಾಕ್ತಾರೆ ಹುಷಾರ್!

Mainashree
Updated On : 29 Apr 2014, 11:19 am

ಬೇಸಿಗೆ ಬಿಸಿಲು ಹೆಚ್ಚಾಗುತ್ತಿದ್ದಂತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಮಂಗಳವಾರ ಕೋಲಾರ ಜಿಲ್ಲಾಧಿಕಾರಿ ಬರ ಪರಿಸ್ಥಿತಿ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಶಾಸಕ ರಮೇಶ್ಕುಮಾರ್ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕೆಂಡ ಕಾರಿದರು. ಬೋರ್ವೆಲ್ಗಳಿಗೆ ವಿದ್ಯುತ್ ಸಂಪರ್ಕ ನೀಡಲು ವಿಳಂಬ ಮಾಡುತ್ತಿರುವುದು ಅವರ ಕೋಪಕ್ಕೆ ಕಾರಣ. ಅದೇ ರೀತಿ, ಚಿಕ್ಕಬಳ್ಳಾಪುರದಲ್ಲಿ ಶಾಸಕ ಕೆ.ಸುಧಾಕರ್, ಮುಳಬಾಗಲಲ್ಲಿ ಶಾಸಕ ಜಿ.ಮಂಜುನಾಥ್, ಬಂಗಾರಪೇಟೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಶಿಡ್ಲಘಟ್ಟದಲ್ಲಿ ಶಾಸಕ ಎಂ.ರಾಜಣ್ಣ ಟಾಸ್ಕ್ಫೋರ್ಸ್ ಸಭೆ ನಡೆಸಿ, ನೀರು ಸಮಸ್ಯೆ ಬಗ್ಗೆ ಚರ್ಚಿಸಿದ್ದಾರೆ.

ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ
ಕೋಲಾರದಲ್ಲಿ ಜಿಲ್ಲಾಧಿಕಾರಿ ಡಿ.ಕೆ.ರವಿ ನೇತೃತ್ವದಲ್ಲಿ ಸಭೆ
ಕೋಲಾರ: 'ಕುಡಿಯವ ನೀರಿನ ಯೋಜನೆಗಳಿಗೆ ತೊಂದರೆ ಮಾಡಿದಲ್ಲಿ ಜನ ಸುಮ್ನೆ ಬಿಡಲ್ಲ. ಹೊಸದಾಗಿ ಕೊರೆಸಿರುವ ಕೊಳವೆ ಬಾವಿಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ. ಇಲ್ಲದಿದ್ದರೆ ಜನ ನಿಮ್ಮನ್ನು ಕಟ್ಟಿ ಹಾಕಿ ಊಟ ತಿಂಡಿ ಇಲ್ಲದಂತೆ ಮಾಡುತ್ತಾರೆ. ಬರ ಪರಿಸ್ಥಿತಿ ಅರ್ಥ ಮಾಡಿಕೊಳ್ಳದಿದ್ದರೆ ಸಾಲಾಗಿ ನಿಲ್ಲಿಸಿ ಕಡಿದು ಹಾಕ್ತಾರೆ..'
- ಇದು ಶಾಸಕ ಕೆ.ಆರ್.ರಮೇಶ್ಕುಮಾರ್ ಅವರು ಬೆಸ್ಕಾಂ ಅಧಿಕಾರಿಗಳಿಗೆ ನೀಡಿದ ಎಚ್ಚರಿಕೆ. ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ಬರ ಪರಿಸ್ಥಿತಿ ಕುರಿತು ಚರ್ಚಿಸಲು ಕರೆದಿದ್ದ ಜನಪ್ರತಿನಿಧಿಗಳ ಸಭೆಯಲ್ಲಿ ರಮೇಶ್ಕುಮಾರ್ ಮಾತನಾಡಿದ ಪರಿ.
ಕೋಲಾರ ನಗರಸಭೆ ಅಧ್ಯಕ್ಷ ಮುಬಾರಕ್ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಅಧಿಕಾರಿಗಳು ಹೊಸದಾಗಿ ಕೊರೆಸಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಸ್ಕಾಂ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆಂದು ದೂರಿದರು. ಕೆಲವು ತಾಲೂಕುಗಳ ತಾಪಂ ಇಒಗಳು ಕುಡಿಯುವ ನೀರಿಗಾಗಿ ವಿದ್ಯುತ್ ಬಳಕೆ ಮಾಡಿಕೊಂಡ ಹಿನ್ನಲೆಯಲ್ಲಿ ಬೆಸ್ಕಾಂ ಅಧಿಕಾರಿಗಳು ಪಿಡಿಒಗಳ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆಂದು ಆರೋಪಿಸಿದರು.
ಇದಕ್ಕೆ ದ್ವನಿಗೂಡಿಸಿದ ಕೋಲಾರ ನಗರಸಭೆ ಆಯುಕ್ತ ಜಗದೀಶ್ ಅವರು, ಸಾರ್ವಜನಿಕರ ಸಲುವಾಗಿ ವಿದ್ಯುತ್ ಬಳಕೆ ಮಾಡಿಕೊಳ್ಳಲಾಗಿದ್ದು, ಬೆಸ್ಕಾಂ ಅಧಿಕಾರಿಗಳು 20 ಲಕ್ಷ ದಂಡ ವಿಧಿಸುವುದಾಗಿ ತಮಗೆ ಬೆದರಿಕೆ ಹಾಕಿದ್ದಾರೆಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸರ್ಕಾರಿ ಕೆಲಸಕ್ಕೆ ವಿದ್ಯುತ್ ಬಳಕೆ ಮಾಡಿದರೆ, ದಂಡ ವಿಧಿಸುವುದಾಗಿ ಹೇಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ವಿದ್ಯುತ್ ಕಳ್ಳರಿಗೆ ದಂಡ ಹಾಕಿ: ಬೆಸ್ಕಾಂ ಅಧಿಕಾರಿಗಳಿಗೆ ಜನತೆಯ ಮೇಲೆ ಕಾಳಜಿ ಇಲ್ಲ. ಅನಧಿಕೃತವಾಗಿ ವಿದ್ಯುತ್ ಬಳಕೆ ಮಾಡುತ್ತಿರುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕುಡಿಯುವ ನೀರಿನ ಯೋಜನೆಗಳಿಗೆ ಕೇಬಲ್ ಎಳೆದರೆ ಪ್ರಕರಣ ದಾಖಲಿಸುವುದಾಗಿ ದಮಕಿ ಹಾಕುತ್ತಾರೆ. ಕಾಮಗಾರಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿ ವರ್ಷವಾದರೂ ಕೆಲಸ ಮಾಡಿಕೊಡುತ್ತಿಲ್ಲ. ನಗರಸಭೆ ಅಧಿಕಾರಿಗಳನ್ನು ನಿಕೃಷ್ಟವಾಗಿ ನೋಡುತ್ತಾರೆ. ಕಚೇರಿಗೆ ಹೋದರೆ ಗೌರವ ನೀಡಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಕುಪಿತರಾದ ಶಾಸಕ ರಮೇಶ್ಕುಮಾರ್, 'ವಿದ್ಯುತ್ ಕದಿಯುವ ಕಳ್ಳರನ್ನು ಬಿಟ್ಟು ಜನರಿಗೆ ನೀರು ಕೊಡುವ ಪಿಡಿಒಗಳ ಮೇಲೆ, ನಗರಸಭೆ ಆಯುಕ್ತರ ಮೇಲೆ ನಿಮ್ಮ ಪೌರುಷ ತೋರಿದ್ರೆ ಹೇಗೆ? ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಹೊಸದಾಗಿ ಕೊರೆಸಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ ಜನ ನಿಮ್ಮನ್ನು ಸುಮ್ನೆ ಬಿಡಲ್ಲ, ಸಾಲಾಗಿ ನಿಲ್ಲಿಸಿ ಕಡಿಯುತ್ತಾರೆ' ಎಂದು ಎಚ್ಚರಿಸಿದರು.
ಬೆಸ್ಕಾಂ ಗ್ರಾಮಾಂತರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರಮೇಶ್ ಅವರು, ಬಾಕಿ ಉಳಿದಿರುವ ಕೆಲಸವನ್ನು ತ್ವರಿತಗತಿಯಲ್ಲಿ ಮುಗಿಸಿಕೊಡುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ವೈ.ರಾಮಕ್ಕ, ಕೊತ್ತೂರು ಮಂಜುನಾಥ್, ಮಂಜುನಾಥಗೌಡ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಜಿಪಂ ಸಿಇಒ ವಿನೋತ್ ಪ್ರಿಯಾ ಹಾಜರಿದ್ದರು.

ನಾನೀಗ ವಾಟರ್ಮ್ಯಾನ್
ನಾನೀಗ ಎಂಎಲ್ಎ ಆಗಿ ಕೆಲಸ ನಿರ್ವಹಿಸುತ್ತಿಲ್ಲ. ವಾಟರ್ವ್ಯಾನ್ ಆಗಿದ್ದೇನೆ. ನನ್ನಲ್ಲಿರುವ ಎರಡು ಮೊಬೈಲ್ಗಳು ದಿನದ ಇಪ್ಪತ್ತು ನಾಲ್ಕು ಗಂಟೆ ಚಾಲ್ತಿಯಲ್ಲಿ ಇರುತ್ತವೆ. ಜನತೆ ನೀರಿನ ಸಮಸ್ಯೆ ಹೇಳಿದ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದು ಇಲ್ಲವೇ ನಾನೇ ಸ್ಥಳಕ್ಕೆ ಹೋಗಿ ನೀರು ಕೊಡಿಸುತ್ತಿದ್ದೇನೆ. ನೀರಿಗೆ ಹಣದ ಕೊರತೆ ಇಲ್ಲ. ಎಲ್ಲಿಗೆ ಟ್ಯಾಂಕರ್ ಮೂಲಕ ನೀರು ಕೊಡಬೇಕಾದ ಅವಶ್ಯಕತೆ ಇದೆಯೋ ಸಂಬಂಧಪಟ್ಟ ಅಧಿಕಾರಿಗಳು ಪಾರದಾರ್ಶಕವಾಗಿ ನೀರು ಕೊಟ್ಟು ಬಿಲ್ಗಳನ್ನು ಅಡಿಟ್ ಮಾಡಿಕೊಟ್ಟಲ್ಲಿ ತಕ್ಷಣ ಹಣ  ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement