ತಾಪಂ ವಸತಿಗೃಹಗಳಲ್ಲಿದ್ದ ಕುಟುಂಬಗಳ ತೆರವು
ಚಿಂತಾಮಣಿ: ಇಲ್ಲಿನ ತಾಲೂಕು ಕಚೇರಿಯ ಹಿಂಭಾಗದಲ್ಲಿರುವ ತಾಪಂ ವಸತಿಗೃಹಗಳಲ್ಲಿ ಅನಧಿಕೃತವಾಗಿ ವಾಸವಾಗಿರುವ ಕುಟಂಬಗಳನ್ನು ಮಂಗಳವಾರ ತಾಪಂ ಇಒ ಹಾಗೂ ಪೊಲೀಸ್ ಸಿಬ್ಬಂದಿ ತೆರವುಗೊಳಿಸಿದರು. ಆದರೆ, ಕುಟುಂಬಗಳ ಸದಸ್ಯರು ಅಧಿಕಾರಿಗಳು, ಪೊಲೀಸರಿಗೆ ಅವಾಚ್ಯವಾಗಿ ಬೈದ ಘಟನೆ ನಡೆಯಿತು.
ನ್ಯಾಯಾಲಯದ ಆದೇಶದಂತೆ ಇಒ ವಸಂತಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ಇಲ್ಲಿರುವ ವಸತಿ ನಿಲಯದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ಕುಟುಂಬಗಳು ಅನಧಿಕೃತವಾಗಿ ವಾಸವಾಗಿವೆ.
ಮಾತಿನ ಚಕಮಕಿ ಧರಣಿ: ಏಕಾಏಕಿಯಾಗಿ ತೆರವಿಗೆ ಮುಂದಾಗಿರುವುದು ಅಲ್ಲಿದ್ದವರ ಆಕ್ರೋಶಕ್ಕೆ ಕಾರಣವಾಯಿತು. ಪೊಲೀಸರು, ಅಧಿಕಾರಿಗಳ ಜತೆ ಮಾತಿನ ಚಕಮಕಿ ನಡೆಯಿತು. ಸ್ವಲ್ಪ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮನೆಯ ಗೃಹಪಯೋಗಿ ಸಾಮಾನುಗಳನ್ನು ತಾಪಂ ಸಿಬ್ಬಂದಿ, ಪೊಲೀಸರು ಬಿಸಾಡಿದರು. ಇದನ್ನು ಖಂಡಿಸಿ ಅಲ್ಲಿದ್ದವರು ನಡು ಬೀದಿಯಲ್ಲಿ ಕುಳಿತು ಧರಣಿ ನಡೆಸಿದರು. ನಂತರ ಮಧ್ಯ ಪ್ರವೇಶಿಸಿದ ವೃತ್ತ ನಿರೀಕ್ಷಕ ನಂಜಪ್ಪ, ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಮನವರಿಕೆ ಮಾಡಿಕೊಟ್ಟರು. ನಂತರ ನಿವಾಸಿಗಳು ಸ್ವಯಂ ಪ್ರೇರಿತರಾಗಿ ಮನೆಯಲ್ಲಿರುವ ವಸ್ತುಗಳನ್ನು ತೆರವುಗೊಳಿಸಿದರು.