ಆಸ್ಪತ್ರೆಗಳು ರೆಡಿ; ಉದ್ಘಾಟನೆಗೇನು ದಾಡಿ?
ಬಂಗಾರಪೇಟೆ: ಗ್ರಾಮೀಣ ಪ್ರದೇಶದಲ್ಲಿ ಜನರು ಆರೋಗ್ಯ ಸುಧಾರಿಸಲಿ ಎಂಬ ಕಾರಣಕ್ಕೆ ಸರ್ಕಾರ ಆಸ್ಪತ್ರೆಗಳನ್ನು ನಿರ್ಮಿಸುತ್ತಿದೆ. ವಿಪರ್ಯಾಸ ಎಂದರೆ, ಕಾಮಸಮುದ್ರ, ಬೂದಿಕೋಟೆ ಹಾಗೂ ದೊಡ್ಡಚಿನ್ನಹಳ್ಳಿಯಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಗಳಿಗೆ ಇದುವರೆಗೂ ಉದ್ಘಾಟನೆಯ ಭಾಗ್ಯ ದೊರೆತಿಲ್ಲ!
ಈ ಊರುಗಳಲ್ಲಿ ಆಸ್ಪತ್ರೆಗಳ ನಿರ್ಮಾಣವಾಗಿ ಬರೋಬ್ಬರಿ ಒಂದುವರೆ ವರ್ಷವಾಗಿದೆ. ಆದರೂ ಇನ್ನೂ ಉದ್ಘಾಟನೆಯಾಗಿಲ್ಲ. ಇದರಿಂದ ಈ ಪ್ರದೇಶಗಳ ಸುತ್ತಮುತ್ತಲಿನ ಗ್ರಾಮಸ್ಥರು ಪಟ್ಟಣಗಳಿಗೆ ಅಲೆಯುವುದ ಇನ್ನು ತಪ್ಪಿಲ್ಲ.
ಕಾಮಸಮುದ್ರ, ಬೂದಿಕೋಟೆ ಹಾಗೂ ದೊಡ್ಡಚಿನ್ನಹಳ್ಳಿಯಲ್ಲಿ ನಿರ್ಮಾಣವಾಗಿರುವ ಹೊಸ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳನ್ನು ಒಬ್ಬರೇ ಗುತ್ತಿಗೆಪಡೆದಿದ್ದು, ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಆದರೆ, ಆರೋಗ್ಯ ಇಲಾಖೆ ಅವರಿಗೆ ಇನ್ನೂ ಬಿಲ್ ಪಾವತಿಸಿಲ್ಲ. ಹಾಗಾಗಿ, ಅವರು ಕಟ್ಟಡಗಳನ್ನು ಹಸ್ತಾಂತರಿಸಲು ಮುಂದಾಗಿಲ್ಲ. ಕಾಮಸಮುದ್ರ ಹೋಬಳಿ ಕೇಂದ್ರವಾಗಿದ್ದರೂ ಇಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಇಲ್ಲದೆ ಬಡ ಜನರು ಆರೋಗ್ಯ ರಕ್ಷಣೆಗಾಗಿ ಹೆಣಗಾಡುವಂತಾಗಿದೆ. ಇರುವ ಆಸ್ಪತ್ರೆಯಲ್ಲಿ ಎಲ್ಲವೂ ಸರಿಯಿಲ್ಲ. ಮಳೆ ಬಂದರೆ ಮೇಲ್ಚಾವಣಿಯಿಂದ ನೀರು ಸೋರುತ್ತದೆ. ವೈದ್ಯರ ಕೊರತೆ. ದಾದಿಯರು ಇಲ್ಲ. ರಾತ್ರಿ ಪಾಳಿಯದಲ್ಲಿ ರೋಗಿಗಳು ಬಂದರೆ ವಿಚಾರಿಸುವವರೇ ದಿಕ್ಕಿಲ್ಲ. ಇನ್ನು ವೈದ್ಯರಿಗಾಗಿ ಮೀಸಲಿಟ್ಟಿರುವ ವಸತಿ ಗೃಹಗಳು ಪಾಳು ಬಿದ್ದಿವೆ.
ಕೋಲಾರ ಜಿಲ್ಲಾ ಉಸ್ತುವಾರಿಯಾಗಿರುವ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಇತ್ತ ಗಮನ ಹರಿಸಬೇಕಿದೆ. ಅವರ ಉಸ್ತುವಾರಿಯಲ್ಲಿರುವ ಜಿಲ್ಲೆಯಲ್ಲಿ ಈ ಪರಿಸ್ಥಿತಿಯಾದರೆ ಬೇರೇಡೆ ಹೇಗಿರಬಹುದು? ಆದಷ್ಟು ಬೇಗ ಹೊಸ ಆಸ್ಪತ್ರೆಗಳನ್ನು ಉದ್ಘಾಟಿಸಲಿ ಎಂಬುದು ಇಲ್ಲಿನ ಜನರು ಅಪೇಕ್ಷೆ.
ಕೆ.ರಮೇಶ್