ಕೆರೆಗಳ ಕೊರಗು ಕೇಳಿಸುತ್ತಿಲ್ಲ ಸರ್ಕಾರದ ಕಿವಿಗೂ!
ಕೋಲಾರ: 'ಕೆರೆಗಳ ನಾಡು' ಎಂದೇ ಖ್ಯಾತಿಯಾಗಿದ್ದ ಕೋಲಾರ ಜಿಲ್ಲೆ ಬರಡೋ ಬರಡು!
ಕೆರೆ ನುಂಗಣ್ಣರಿಂದಾಗಿ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ, ಜನತೆಯಲ್ಲಿ ನೆಲ-ಜಲದ ಬಗ್ಗೆ ಅಭಿಮಾನಶೂನ್ಯತೆಯಿಂದಾಗಿ ಕೋಲಾರ ಜಿಲ್ಲೆ ಶಾಶ್ವತ ಬರಗಾಲಕ್ಕೆ ತುತ್ತಾಗಿದೆ.
'ಸಿಲ್ಕ್, ಮಿಲ್ಕ್, ಗೋಲ್ಡ್'ನಿಂದ ಕೋಲಾರ ಜಿಲ್ಲೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಲು ಸಾಧ್ಯವಾಗಿತ್ತು. ಅದೇ ರೀತಿ ರೈತರ ಬದುಕಿಗೆ ವರದಾನವಾಗಿದ್ದ ಕೆರೆಗಳು, ಕಲ್ಯಾಣಿಗಳನ್ನು ಸಂರಕ್ಷಿಸದ ಪರಿಣಾಮ, 15 ವರ್ಷಗಳಿಂದ ಶಾಶ್ವತ ನೀರಾವರಿಯ ಹೋರಾಟ ಪ್ರತಿಧ್ವನಿಸುತ್ತಿದೆ.
1968ರ ಹೊತ್ತಿಗೆ ಕೋಲಾರ ಜಿಲ್ಲೆಯಲ್ಲಿ 35783 ಕೆರೆಗಳಿದ್ದವು. ಈ ಕೆರೆಗಳು ಗಂಗರು, ಚೋಳರು,ವಿಜಯನಗರ ಸಾಮ್ರಾಜ್ಯದ ಕಾಲದವರು ನಿರ್ಮಿಸಿದ್ದವು. ಸ್ವಾತಂತ್ರ್ಯ ಬಂದು 67 ವರ್ಷಗಳಾದರೂ ಒಂದೇ ಒಂದು ಹೊಸ ಕೆರೆ ನಿರ್ಮಿಸದಿದ್ದರೂ ಐತಿಹಾಸಿಕ ಕೆರೆಗಳನ್ನು ಸಂರಕ್ಷಿಸಿಕೊಳ್ಳುವಲ್ಲಿ ನಾಗರಿಕ ಸರ್ಕಾರ ವಿಫಲವಾಗಿರುವುದು ಮಾತ್ರ ವಿಪರ್ಯಾಸ.
ಜಿಲ್ಲೆಯಲ್ಲೀಗ 2095 ಕೆರೆಗಳು
ಜಿಲ್ಲೆಯಲ್ಲೀಗ 2095 ಕೆರೆಗಳಿದ್ದು, ಇವುಗಳ ರಕ್ಷಣೆ, ಅಭಿವೃದ್ಧಿ ಕೇವಲ ಪ್ರಚಾರದ ವಸ್ತುಗಳಾಗಿವೆ. ಮಳೆಗಾಲದಲ್ಲಿ ಸಿಗುವ ನೀರನ್ನು ತಡೆದಿಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾರಣ ಕೆರೆಗಳು ಹಾಳಾಗಿವೆ. ಬಹುತೇಕ ಕಲ್ಯಾಣಿಗಳು ಮುಚ್ಚಿವೆ. ಅಭಿವೃದ್ಧಿಗೆ ಕಾಳಜಿ ತೋರುವ ಅಧಿಕಾರಿಗಳಿಗೆ ಸಹಕಾರ ಸಿಗುತ್ತಿಲ್ಲ. ಭೂಮಿಯಲ್ಲಿ ಹನಿ ನೀರು ಸಿಗುವುದೂ ಕಷ್ಟವಾಗಿದ್ದರೂ ಕೊಳವೆ ಬಾವಿಗಳ ಮೇಲಿನ ವ್ಯಾಮೋಹ ಕಡಿಮೆಯಾಗಿಲ್ಲ. ಮಳೆ ಕೊಯ್ಲುಕ್ಕೆ ಪ್ರೋತ್ಸಾಹವಿಲ್ಲ. ಹಾಗಾಗಿ ಕೋಲಾರ ಜಿಲ್ಲೆಯಲ್ಲಿ ಪ್ರತಿ ಬರಗಾಲದ ಸಂದರ್ಭದಲ್ಲಿ ಖಾಲಿ ಬಿಂದಿಗೆಗಳ ಪ್ರದರ್ಶನ, ಶಾಶ್ವತ ನೀರಾವರಿಗಾಗಿ ಹೋರಾಟ ಮುಂದುವರೆಯುತ್ತಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ವಿಶ್ವ ಬ್ಯಾಂಕ್ ಸಹಯೋಗದಲ್ಲಿ ಜಿಲ್ಲೆಯ ನೂರಾರು ಕೆರೆಗಳ ಅಭಿವೃದ್ಧಿಗೆ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಆದರೆ, ಯಾವ ಕೆರೆ ಅಭಿವೃದ್ಧಿಯಾಗಿದೆ ಎಂಬುದಕ್ಕೆ ಸಾಕ್ಷಿಗಳು ಇಲ್ಲ.
5 ಕೋಟಿ ಎಲ್ಲಿ ಹೋಯಿತು?
ಬಿಜೆಪಿ ಸರ್ಕಾರವಿದ್ದಾಗ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಟ 5 ಕೆರೆಗಳ ಅಭಿವೃದ್ಧಿಗಾಗಿ 5 ಕೋಟಿ ನೀಡಲಾಗಿತ್ತು. ಆದರೆ, ಯಾವ ಕೆರೆಯಲ್ಲಿ ಹೂಳು ತೆಗೆದು ಅಭಿವೃದ್ಧಿ ಪಡಿಸಲಾಗಿದೆ ಎಂಬುದು ಬೆಳಕಿಗೆ ಬಂದಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿವಾದ ಬಳಿಕವು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿ ಬಜೆಟ್ನಲ್ಲಿ ಪ್ರಕಟಿಸಿದ್ದರು. ಏಪ್ರಿಲ್ 1ರಿಂದಲೇ ಈ ಯೋಜನೆ ಜಾರಿಗೆ ಬರಬೇಕಾಗಿತ್ತು. ಚುನಾವಣೆ ಹಿನ್ನಲೆಯಲ್ಲಿ ತಡವಾಗಿದ್ದು ನೀತಿ ಸಂಹಿತೆ ರದ್ದು ಆಗಿರುವುದರಿಂದ ಕೂಡಲೇ ಯೋಜನೆ ಅನುಷ್ಟಾನಕ್ಕೆ ಬಂದರೆ ಅನುಕೂಲವಾಗುತ್ತದೆ.
ಸಿಎಂ ಬಳಿ ನಿಯೋಗ?
ಕೆರೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಮೇ 20ರಂದು ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವನ್ನು ಸಿಎಂ ಬಳಿ ಕರೆದೊಯ್ಯುವ ಬಗ್ಗೆ ಶಾಸಕ ರಮೇಶ್ಕುಮಾರ್ ಇಂಗಿತ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಒಂಟಿ ಹೋರಾಟ ಸಾಲದು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಪಾಲ್ಗೊಂಡು ಜಿಲ್ಲೆಯ ಪರವಾಗಿ ದನಿ ಎತ್ತುವ ಮೂಲಕ ಸರ್ಕಾರ ಕಣ್ಣು ತೆರೆಸುವ ಕೆಲಸ ಮಾಡಬೇಕು. ದೀರ್ಘಾವಧಿ ಎತ್ತಿನ ಹೊಳೆ ಯೋಜನೆಗೆ ಚಾಲನೆ ಜೊತೆಗೆ ಅಲ್ಪಾವಧಿಯ ಯೋಜನೆಯಾದ ಎಲೆಮಲ್ಲಪ್ಪಶೆಟ್ಟಿ ಕೆರೆಯ ನೀರಿನ ಯೋಜನೆಗೆ ಶೀಘ್ರ ಅನುಮತಿ ಪಡೆಯಲು ಒತ್ತಡ ಹೇರಬೇಕಾಗಿದೆ.
ಪಾ.ಶ್ರೀ.ಅನಂತರಾಮ್