ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಿವೃತ್ತಿ ವೇತನಕ್ಕೆ ಮನವಿ

Mainashree
Updated On : 1 May 2014, 12:07 pm

ಕೋಲಾರ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ನೌಕರರಿಗೆ ನಿವೃತ್ತಿ ನಂತರ ಪಿಂಚಣಿ ಸೌಲಭ್ಯ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಕೋಲಾರ ಜಿಪಂ ನೌಕರರು ಶಾಸಕ ರಮೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನಗರದಲ್ಲಿ ಮಂಗಳವಾರ ಬರ ಪರಿಸ್ಥಿತಿ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಕರೆದಿದ್ದ ಸಭೆಗೆ ಬಂದಿದ್ದ ಶಾಸಕ ರಮೇಶ್‌ಕುಮಾರ್ ಅವರನ್ನು ಭೇಟಿ ಮಾಡಿದ ನೌಕರರು, 2013ರ ಮಾರ್ಚ್ 12 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ರಾಪಂ ಕಾರ್ಯದರ್ಶಿಗಳು, ಪಿಡಿಒಗಳಿಗೆ ಮಾತ್ರ ವೃಂದ ಮತ್ತು ನೇಮಕಾತಿ ನಿಯಮ ರಚಿಸಿ ಸರ್ಕಾರಿ ನೌಕರರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಆದರೆ, ಜಿಪಂ ಮತ್ತು ತಾಪಂ ವೃಂದಗಳ ಲಿಪಿಕ ಸಿಬ್ಬಂದಿಗೆ ವೃಂದ ಮತ್ತು ನೇಮಕಾತಿ ನಿಯಮಗಳ ರಚನೆಯಾಗಿಲ್ಲದಿರುವುದರಿಂದ ನಿವೃತ್ತಿ ನಂತರ ಪಿಂಚಣಿ ಸೌಲಭ್ಯ ಸಿಗುವುದು ಅನುಮಾನವಾಗಿರುವುದರಿಂದ ಸರ್ಕಾರದ ಮೇಲೆ ಒತ್ತಡ ತಂದು ಜಿಪಂ ನೌಕರರಿಗೆ ನಿವೃತ್ತಿ ನಂತರ ಪಿಂಚಣಿ ಸಿಗುವಂತೆ ಮಾಡಬೇಕೆಂದು ಕೋರಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ರಮೇಶ್‌ಕುಮಾರ್, ಲೋಕಸಭಾ ಚುನಾವಣೆಗಳು ಮುಗಿವವರೆಗೆ ವಿಧಾನಸಭಾ ಅಧಿವೇಶನ ನಡೆಯುವುದಿಲ್ಲ. ಅಧಿವೇಶನ ನಡೆಯುವ ಸಂದರ್ಭದಲ್ಲಿ ತಾವುಗಳು ಮನವಿ ನೀಡಿದಲ್ಲಿ ಸದನದಲ್ಲಿ ಚರ್ಚಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಪಂ ಅಧೀಕ್ಷಕಿ ಎನ್. ಸುನಂದಾ, ಪರಮೇಶ್ವರಯ್ಯ, ಸಿಬ್ಬಂದಿ ಬಿ. ಆನಂದ್, ಟಿ.ನಾರಾಯಣಸ್ವಾಮಿ, ಮಂಜುನಾಥ್, ಶ್ರೀನಿವಾಸ್, ಶಕುಂತಲಾ, ಪುಷ್ಪಬಾಯಿ, ಪ್ರಭಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement