ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೀರಿಗೆ ಆಗ್ರಹಿಸಿ ಗ್ರಾಪಂಗೆ ಬೀಗ

Mainashree
Updated On : 1 May 2014, 12:07 pm

ಚಿಂತಾಮಣಿ: ಕುಡಿಯುವ ನೀರು ಪೂರೈಕೆಗೆ ವಿಫಲವಾದ್ದರಿಂದ ಉಪ್ಪಾರ್ಲಹಳ್ಳಿ ಗ್ರಾಮಸ್ಥರು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಭೂಮಿಶೆಟ್ಟಹಳ್ಳಿ ಗ್ರಾಪಂಗೆ ಸೇರುವ ಉಪ್ಪಾರ್ಲಹಳ್ಳಿಯಲ್ಲಿ ಬಹುತೇಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಜನರು ವಾಸವಾಗಿದ್ದಾರೆ. 1 ತಿಂಗಳಿಂದ ಕುಡಿಯುವ ನೀರಿಗೆ ಆಹಾಕಾರ ಎದುರಾಗಿದ್ದರೂ ಗ್ರಾಪಂ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಆರೋಪಿಸಿ ಮಹಿಳೆಯರು, ರೈತರು ಸೇರಿದಂತೆ ನೂರಾರು ಜನರು ಗ್ರಾಪಂಗೆ ಬೀಗ ಜಡಿದು, ನೀರಿಗಾಗಿ ತಮಟೆ ಬಡಿಯುತ್ತಾ ಪ್ರತಿಭಟನೆ ಮಾಡಿದರು.
ಮಾತಿನ ಚಕಮಕಿ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಉಪ್ಪಾರ್ಲಹಳ್ಳಿ ಗ್ರಾಮಸ್ಥರು ಭೂಮಿಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ಕಾರ್ಯಾಲಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಅಧಿಕಾರಿಗಳು ಅತ್ತ ಕಡೆ ತಲೆಹಾಕಲಿಲ್ಲ. ಇದನ್ನು ಖಂಡಿಸಿ ಗ್ರಾಮಸ್ಥರು ಸ್ಥಳದಲ್ಲೇ ಅಡುಗೆ ಮಾಡಲು ಮುಂದಾದರು. ಆಗ ಪೊಲೀಸರು ಮತ್ತು ಗ್ರಾಮಸ್ಥರ ಮಧ್ಯೆ ಚಕಮಕಿ ನಡೆಯಿತು. ಅಧಿಕಾರಿಗಳು ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಪ್ರತಿಭಟನಾಕಾರರನ್ನು ಪೊಲೀಸರು ಸಮಾಧಾನಪಡಿಸಲು ಯತ್ನಿಸಿದರು. ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ವೆಂಕಟರಾಯಪ್ಪ, ಮುಖಂಡರಾದ ನಾರಾಯಣಸ್ವಾಮಿ, ಸುಬ್ಬರಾಯಪ್ಪ, ವೆಂಕಟರೆಡ್ಡಿ, ಶ್ರೀನಿವಾಸರೆಡ್ಡಿ, ಲಕ್ಷ್ಮಿರೆಡ್ಡಿ, ಶಿವಾರೆಡ್ಡಿ, ರಮೇಶ್, ಮಂಜುಳಮ್ಮ, ಲಕ್ಷ್ಮಮ್ಮ, ಚೌಡಮ್ಮ,ಅಮರಾವತಿ, ನಾಗವೇಣಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement