ವಂಚಿಸುವ ಮುಖಂಡರ ನಂಬದಿರಿ
ಕೋಲಾರ: ತಾವು ಮೊದಲ ಬಾರಿಗೆ ಶಾಸಕರಾಗಿದ್ದಾಗ ಆಟೋ ಚಾಲಕರು ಮತ್ತು ಮಾಲೀಕರನ್ನು ಉದ್ಧಾರ ಮಾಡುವುದಾಗಿ ಹೇಳಿ ತಮ್ಮಿಂದ ಸಾಕಷ್ಟು ಅನುಕೂಲ ಪಡೆದುಕೊಂಡು ಮೋಸ ಮಾಡಿದ ಮುಖಂಡರ ರೀತಿ ತಾವು ಮಾಡಬೇಡಿ, ನಿಯತ್ತು ಇಲ್ಲದಿದ್ದರೆ ದೇವರು ಕ್ಷಮಿಸಲ್ಲ ಎಂದು ಶಾಸಕ ವರ್ತೂರ್ ಪ್ರಕಾಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಹಯೋಗದಲ್ಲಿ ಸ್ಥಾಪಿಸಲ್ಪಟ್ಟಿರುವ ಶಿರಡಿ ಸಾಯಿಬಾಬಾ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಆಟೋಗಳನ್ನು ತೆಗೆದುಕೊಳ್ಳಲು ಕೆನರಾ ಬ್ಯಾಂಕ್ನಲ್ಲಿ ವಿಶೇಷವಾಗಿ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದ್ದು ಇದರ ಸದುಪಯೋಗವನ್ನು ತಪ್ಪದೆ ಪಡೆದುಕೊಳ್ಳಿ ಎಂದ ಅವರು, ಆಟೋ ನಿಲ್ದಾಣ ಸ್ಥಾಪನೆಗೆ ಅಗತ್ಯ ಸಹಾಯ ನೀಡುವುದಾಗಿ ತಿಳಿಸಿದರು. ಡಿವೈಎಸ್ಪಿ ಅಶೋಕ್ಕುಮಾರ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ದುಡಿಮೆ ಮಾಡಿ ಬದುಕುತ್ತಿದ್ದಾರೆ. ಆದರೆ ದುಡಿಮೆಯ ಮಾರ್ಗ ಸರಿಯಾಗಿಟ್ಟುಕೊಳ್ಳಲು ಪ್ರತಿಯೊಬ್ಬರೂ ಪಣತೊಡಬೇಕೆಂದು ಹೇಳಿದರು. ನಗರಸಭೆ ಅಧ್ಯಕ್ಷ ಮುಬಾರಕ್ ಮಾತನಾಡಿ ಆಟೋ ಚಾಲಕರು ಉತ್ತಮ ಸಮಾಜ ಸೇವಕರಾಗಿದ್ದು ಕಷ್ಟ ಪಟ್ಟು ಜೀವನ ಸಾಗಿಸುತ್ತಿದ್ದೀರಿ, ನಮಗಾಗಿರುವ ಕಾನೂನನ್ನು ಪಾಲನೆ ಮಾಡಿ ಎಂದರು. ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಚಂದ್ರಶೇಖರ್, ವಿದ್ಯಾರ್ಥಿ ಮುಖಂಡ ಹೂಹಳ್ಳಿ ನಾಗರಾಜ್,ಸಮಾಜ ಸೇವಕ ಬೆಗ್ಲಿ ಸೂರ್ಯಪ್ರಕಾಶ್, ತಾಲೂಕು ಪಂಚಾಯಿತಿ ಸದಸ್ಯ ನಂದಿನಿ ರಾಜಗೋಪಾಲ್, ನಗರಸಭೆ ಮಾಜಿ ಸದಸ್ಯ ಮುನಿಯಪ್ಪ, ಸಂಚಾರ ಇನ್ಸ್ಪೆಕ್ಟರ್ ಜಗದೀಶ್, ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ, ಆಟೋ ಘಟಕದ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಭಾಸ್ಕರ್ ಸೇರಿ ಅನೇಕರಿದ್ದರು.