60 ಅತಿಥಿ ಶಿಕ್ಷಕರ ನೇಮಕ: ದೇವರಾಜ್
ಮುಳಬಾಗಲು: ತಾಲೂಕಿನಲ್ಲಿ 220 ಶಿಕ್ಷಕರ ಹುದ್ದೆ ಖಾಲಿ ಇದ್ದು 60 ಅತಿಥಿ ಶಿಕ್ಷಕರನ್ನು ಇಲಾಖೆ ಮಾರ್ಗದರ್ಶನದಂತೆ ನೇಮಕ ಮಾಡಿಕೊಳ್ಳಲಾಗುವುದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್ ಹೇಳಿದರು.
ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಎಂ.ಎಸ್.ಶ್ರೀನಿವಾಸರೆಡ್ಡಿ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಾಥಮಿಕ ಶಾಲೆಗಳ ದುರಸ್ತಿಗೆ 2 ಲಕ್ಷ ಅನುದಾನ ಬಿಡುಗಡೆಯಾಗಿದೆ. ಗುಜ್ಜನಹಳ್ಳಿ, ಪಿಚ್ಚಗುಂಡ್ಲಹಳ್ಳಿ, ಕಾಡಕಚ್ಚಿನಹಳ್ಳಿ, ವಿ.ಹೊಸಹಳ್ಳಿ ಶಾಲೆಗಳಿಗೆ ತಲಾ 50 ಸಾವಿರ ನೀಡಲಾಗುವುದು. ವಸತಿ ಶಾಲೆಗಳು, ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಬಸ್ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಸೈಕಲ್ ನೀಡಬಾರದೆಂಬ ನಿಯಮವಿದೆ. ಆದರೆ ಮುಖ್ಯಶಿಕ್ಷಕರು ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಿದ್ದಾರೆ. ಉತ್ತನೂರು ಶಾಲೆಯಲ್ಲಿ ಮಾತ್ರ ಆದೇಶ ಪಾಲನೆಯಾಗಿದೆ ಎಂದರು.
ಸಾತನೂರು ಅಂಗನವಾಡಿ ಕೇಂದ್ರಕ್ಕೆ ಅಂಗನವಾಡಿ ಕಾರ್ಯಕರ್ತೆ ಸರಿಯಾಗಿ ಬರುತ್ತಿಲ್ಲ. ಹೀಗಾಗಿ ಅದೇ ಗ್ರಾಮದ ಬೇರೊಬ್ಬರನ್ನು ನೇಮಿಸಿಕೊಳ್ಳಬೇಕು ಎಂದು ಸದಸ್ಯೆ ಲಕ್ಷ್ನಿದೇವಮ್ಮ ಒತ್ತಾಯಿಸಿದರು. ತಾಪಂ ಅಧ್ಯಕ್ಷೆ ಅರ್ಚನಾ ಮಲ್ಲಿಕಾರ್ಜುನ್, ಉಪಾಧ್ಯಕ್ಷ ರಾಜೇಗೌಡ, ಪಿ.ವಿ.ಶಿವರಾಮರೆಡ್ಡಿ, ತ್ರೀವೇಣಮ್ಮ, ಸುಬ್ಬಮ್ಮ ಅಪ್ಪಿ, ಶ್ರೀರಾಮಪ್ಪ, ನೆಗವಾರ ಶ್ರೀನಿವಾಸ್ ಇದ್ದರು.