ಅಕ್ರಮ ಮದ್ಯ ಮಾರಾಟ ತಡೆಯಲು ಮಹಿಳೆಯರ ಆಗ್ರಹ
ಮಾಲೂರು: ತಾಲೂಕಿನ ಹಲಾವರು ಗ್ರಾಮದ ದಿನಸಿ ಅಂಗಡಿಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ನಾರಾಯಣಗೌಡ ಬಣದ ಕರವೇ ಮಹಿಳಾ ವಿಭಾಗದ ಕಾರ್ಯಕರ್ತೆಯರು ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಲತಾಬಾಯಿ, ಗ್ರಾಮ-ಗ್ರಾಮಗಳಲ್ಲಿ ಮದ್ಯದಂಗಡಿಗಳು ತಲೆ ಎತ್ತುತ್ತಿವೆ. ತಕ್ಷಣವೇ ತಹಸೀಲ್ದಾರ್ ಅವರು ದಿನಸಿ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ಮದ್ಯವನ್ನು ನಿಲ್ಲಿಸಬೇಕು ಮತ್ತು ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮಂಜುನಾಥ್ ಗೌಡ, ಎಸ್.ಎಂ.ರಾಜು, ಎಸ್.ಆರ್.ಲಕ್ಷಮ್ಮ, ಸರಸ್ವತಮ್ಮ, ನಾರಾಯಣಮ್ಮ, ಲಕ್ಷ್ಮಿದೇವಿ, ಮುನಿರತ್ನಮ್ಮ, ಶಾರದಮ್ಮ, ವಿಮಲಮ್ಮ ಇದ್ದರು.
ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ಕೋರಿ ಮನವಿ
ಬಂಗಾರಪೇಟೆ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಕೂಡಲೆ ಸ್ಪಂದಿಸಿ ಕೇಂದ್ರದ ಮೇಲೆ ಒತ್ತಡ ತಂದು ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಕಳೆದ ಮೂರು ತಿಂಗಳಿಂದ ರೇಷ್ಮೆ ಬೆಲೆಯಲ್ಲಿ ತೀವ್ರ ಕುಸಿತ ಕಂಡು ಬರುತ್ತಿದ್ದು, ಸರ್ಕಾರ ರೈತನ ನೆರವಿಗೆ ಬರುತ್ತಿಲ್ಲ. ರೇಷ್ಮೆ ಬೆಳೆಗಾರರು ಬೀದಿಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ಕೆ.ಜಿ. ಗೂಡು 350ರಿಂದ 370 ರು.ಗೆ ಮಾರಾಟವಾಗುತ್ತಿತ್ತು, ಆದರೆ ಈಗ 260ರಿಂದ 320ಕ್ಕೆ ಇಳಿದಿದೆ, ಹಾಗೆಯೇ ಮಿಶ್ರತಳಿ ಬೈವೋಲ್ಟಿನ್ ಕೆಜಿಗೆ 450ರಿಂದ 510 ರು.ಇದ್ದಂತಹ ಬೆಲೆ ಈಗ 260ರಿಂದ 320ಕ್ಕೆ ಇಳಿದಿದೆ. ಇಂಥ ಸ್ಥಿತಿಯಲ್ಲಿ ಸರ್ಕಾರ ರೈತನ ನೆರವಿಗೆ ಬರಬೇಕು ಎಂದು ಅವರು ಆಗ್ರಹಿಸಿದರು. ಸರ್ಕಾರವು ರೇಷ್ಮೆ ಬೆಳೆಗಾರರನ್ನು ದಿಕ್ಕುತಪ್ಪಿಸುವ ಉದ್ದೇಶದಿಂದ ಬೈವೋಲ್ಟಿನ್ ಬೆಳೆಯುವಂತೆ ಎಲ್ಲ ಪರಿಕರಗಳನ್ನು ಕೊಟ್ಟು ಸ್ವಲ್ಪ ದಿನಗಳ ಕಾಲ ಉತ್ತಮ ಬೆಲೆ ನೀಡಿ ಈಗ ವಂಚಿಸುತ್ತಿದೆ ಎಂದು ದೂರಿದರು. ಇದು ರೇಷ್ಮೆ ಬೆಳೆಗಾರನನ್ನು ಪಾತಾಳಕ್ಕೆ ತಳ್ಳುವ ಕೆಲಸವಾಗಿದೆ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸಾವಿರ ಅಡಿಗಳ ಆಳದಿಂದ ನೀರನ್ನು ತೆಗೆದು ರೇಷ್ಮೆ ಬೆಳೆದು ಮಾರುಕಟ್ಟೆಗೆ ತಂದರೆ ಉತ್ತಮ ಬೆಲೆ ಸಿಗುತ್ತಿಲ್ಲ. ಸರ್ಕಾರ ಈ ಕೂಡಲೆ ರೇಷ್ಮೆ ಬೆಳೆಗಾರನ ನೆರವಿಗೆ ಬಾರದೆ ಹೋದರೆ ಮುಂದಿನ ದಿನಗಳಲ್ಲಿ ರೈತಸಂಘದವತಿಯಿಂದ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಮಂಜುನಾಥ್, ನಾಗೇಶ್, ನಾಗರಾಜ್, ಲಕ್ಷ್ಮಯ್ಯಗೌಡ, ಜಗದೀಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.