ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಲಾರ ಜಿಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

Rashmi Kasaragodu
Updated On : 2 Aug 2014, 12:38 pm

ಕೋಲಾರ: ಜಿಲ್ಲಾ ಪಂಚಾಯಿತಿಯ ಕಡೆಯ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ಆ.6ಕ್ಕೆ ಚುನಾವಣೆ ನಿಗದಿಪಡಿಸಲಾಗಿದೆ. 28 ಸದಸ್ಯರನ್ನು ಒಳಗೊಂಡ ಜಿಪಂನಲ್ಲಿ ಪ್ರಸ್ತುತ ಜೆಡಿಎಸ್ 14 ಸದಸ್ಯರ ಬಲಹೊಂದಿದೆ. ಕಾಂಗ್ರೆಸ್ 5,ಬಿಜೆಪಿಯ 7 ಹಾಗೂ ಪಕ್ಷೇತರರು ಮೂವರು ಇದ್ದಾರೆ.
ಪಕ್ಷೇತರರ ಪೈಕಿ ಚೌಡೇಶ್ವರಿ ಜೆಡಿಎಸ್ ಸೇರಿದ್ದಾರೆ. ಎಂ.ಎಸ್.ಆನಂಜ್ ಬಿಜೆಪಿ ಕಡೆ ಜಾರಿದ್ದಾರೆ. ಬಿಜೆಪಿಯ 7 ಸದಸ್ಯರ ಪೈಕಿ ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ ಬೆಂಬಲಿತ ಕೆಲ ಸದಸ್ಯರು ಕಾಂಗ್ರೆಸ್ ಪರವಾಗಿದ್ದಾರೆ.
ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಎಲ್ಲ ಪಕ್ಷಗಳಿಗೆ ಕನಿಷ್ಠ 15ರಿಂದ 16ಸದಸ್ಯರು ಬೇಕಾಗಿದ್ದಾರೆ. ಕಡೆ ಅವಧಿಯ ಅಧಿಕಾರ ಅನುಭವಿಸಲು ಜೆಡಿಎಸ್ ರಣತಂತ್ರ ರೂಪಿಸುತ್ತಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ-ಎ(ಮಹಿಳೆಗೆ)ಮೀಸಲಾಗಿದೆ. ಜೆಡಿಎಸ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿದೆ. ಶಾಸಕ ವರ್ತೂರ್ ಬಣದಿಂದ ಗೆದ್ದು ಜೆಡಿಎಸ್ ಸೇರಿ ಜಿಪಂ ಅಧ್ಯಕ್ಷರಾಗಿದ್ದ ಚೌಡೇಶ್ವರಿ ಮತ್ತೆ ಅವಕಾಶ ಕೇಳಿದ್ದಾರೆ. ರತ್ನಮ್ಮ ಪರವಾಗಿ ಪತಿ ಕೋಮುಲ್ ನಿರ್ದೇಶಕ ನಂಜುಂಡೇಗೌಡರು ಲಾಬಿ ನಡೆಸಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷ ಸ್ಥಾನಕ್ಕೆ ಕಳೆದ ಮೂರು ವರ್ಷಗಳಿಂದ ಪ್ರಯತ್ನಿಸುತ್ತಿರುವ ಎಲ್. ಆಶಾ ಲೋಕೇಶ್ ಅವರು ಈ ಬಾರಿ ಅಧ್ಯಕ್ಷ ಸ್ಥಾನ ಕೊಡಲೇಬೇಕೆಂದು ಪಟ್ಟು ಹಿಡಿದ್ದಾರೆ.
ಎ.ಸಿ. ಪುಷ್ಪಾವತಿ ಪರವಾಗಿ ಪತಿ ರಾಜಶೇಖರ ರೆಡ್ಡಿ ಬ್ಯಾಟಿಂಗ್ ಮಾಡಿದ್ದಾರೆ. ಜಿಪಂನಲ್ಲಿ ಅತ್ಯಂತ ಹಿರಿಯ ಸದಸ್ಯರಾದ ಮಂಗಮ್ಮ ಮುನಿಸ್ವಾಮಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ತಮಗೆ ಅವಕಾಶ ನೀಡಿ, ಈ ಹಿಂದೆ ಉತ್ತಮ ಆಡಳಿತ ನೀಡಿರುವುದಾಗಿ ಮನವಿ ಮಾಡಿದ್ದಾರೆ.
ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಚರ್ಚಿಸಲು ಬೆಂಗಳೂರಿನ ರೆಸಾರ್ಟ್ನಲ್ಲಿ ಸೇರಿದ್ದ ಜೆಡಿಎಸ್ ಮುಖಂಡರಾದ ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ, ಶಾಸಕರಾದ ಮಂಜುನಾಥಗೌಡ, ಮುಳಬಾಗಿಲು ತಾಲೂಕಿನ ಜೆಡಿಎಸ್ ಮುಖಂಡ ಆಲಂಗೂರು ಶಿವಣ್ಣ ಇತರರು ಒಗ್ಗಟ್ಟಿನಿಂದ ಚುನಾವಣೆ ಎದುರಿಸುವಂತೆ ಪಕ್ಷದ ಸದಸ್ಯರಿಗೆ ಸಲಹೆ ನೀಡಿದ್ದಾರೆ. ಸದರಿ ಸಭೆಯಲ್ಲಿ ಮಹಿಳಾ ಸದಸ್ಯರ ಪೈಕಿ ಪತಿರಾಯರು ಪಾಲ್ಗೊಂಡು ಪತ್ನಿಯರ ಪರವಾಗಿ ವಕಾಲತ್ತು ವಹಿಸಿದ್ದು, ವರಿಷ್ಠರು ಸೂಚಿಸುವ ಅಭ್ಯರ್ಥಿಯನ್ನು ಬೆಂಬಲಿಸುವುದು ಸೂಕ್ತವೆಂದು ಮುಖಂಡರು ಸಲಹೆ ನೀಡಿದ್ದಾರೆ.
ಜೆಡಿಎಸ್ ಸದಸ್ಯರಲ್ಲಿ ಒಗ್ಗಟ್ಟು ಮೂಡಿಸಲು ಮತ್ತು ಕುದುರೆ ವ್ಯಾಪಾರ ತಪ್ಪಿಸಲು ಹೊರ ರಾಜ್ಯಕ್ಕೆ ಸದಸ್ಯರನ್ನು ಕರೆದೊಯ್ದು ಆ.6ರಂದು ಬೆಳಿಗ್ಗೆ ಕೋಲಾರಕ್ಕೆ ಕರೆತರಲು ನಿರ್ಧರಿಸಲಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯ ನಿರ್ಧಾರ ಏನೆಂಬುದು ಇನ್ನು ತಿಳಿಯುತ್ತಿಲ್ಲ. ಕಾಂಗ್ರೆಸ್ನಲ್ಲಿ ಕೇವಲ 5 ಸದಸ್ಯರಿದ್ದು ಬಹುಮತಕ್ಕೆ ಕನಿಷ್ಠ 10 ಸದಸ್ಯರ ಅವಶ್ಯಕತೆ ಇದೆ. ಮಾಲೂರು ತಾಲೂಕಿನ ಬಿಜೆಪಿಯ 5 ಸದಸ್ಯರಲ್ಲಿ ಕೆಲವರು ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ ಹೇಳಿದಂತೆ ಕೇಳುವ ನಿರೀಕ್ಷೆಯಿದೆ. ಬಹುಮತಕ್ಕೆ ಬೇಕಾದ ಸದಸ್ಯರನ್ನು ಸೆಳೆಯಲು ಮಾಜಿ ಕೇಂದ್ರ ಸಚಿವ, ಸಂಸದ ಕೆ.ಹೆಚ್. ಮುನಿಯಪ್ಪನವರು ಯಾವ ರೀತಿಯ ಕಾರ್ಯತಂತ್ರ ರೂಪಿಸುತ್ತಾರೆಂಬುದು ಕುತೂಹಲ ಮೂಡಿಸಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement