ದುರಸ್ತಿ ನೆಪದಲ್ಲಿ ಬೆಸ್ಕಾಂನಿಂದ ಗ್ರಾಹಕರಿಗೆ ಕಿರಿಕಿರಿ
ಕೋಲಾರ: ವಿದ್ಯುತ್ ಮಾರ್ಗಗಳ ದುರಸ್ತಿ ನೆಪದಲ್ಲಿ ಬೆಸ್ಕಾಂ ಪದೆ ಪದೆ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಕೋಲಾರದಲ್ಲಿ ವಿದ್ಯುತ್ ಮಾರ್ಗಗಳ ನವೀಕರಣಕ್ಕೆ ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಗುಣಮಟ್ಟದ ವಿದ್ಯುತ್ ಸಿಗುತ್ತಿಲ್ಲ. ಯಾವುದೇ ಮಾಹಿತಿ ಇಲ್ಲದೆ ಕೆಲವು ತಡೆ ದಿನಗಟ್ಟಲೆ ವಿದ್ಯುತ್ ಕಡಿತ ಮಾಡಿ ಗ್ರಾಹಕರಿಗೆ ತೊಂದರೆ ನೀಡಲಾಗುತ್ತಿದೆ. ದಿನಕ್ಕೆ ಒಂದೆರಡು ಬಾರಿ ವಿದ್ಯುತ್ ಕಡಿತಗೊಂಡರೆ ಪರವಾಗಿಲ್ಲ. ಆದರೆ ಹತ್ತಾರು ಬಾರಿ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ಪರಿತಪಿಸುವಂತಾಗಿದೆ. ಈ ಮುಂಚೆ ಕಂಟ್ರೋಲ್ ರೂಮ್ಗೆ ವಿಚಾರಿಸಿದರೆ ಸೌಜನ್ಯದ ಉತ್ತರ ಸಿಗುತ್ತಿತ್ತು. ಈಗ ಫೋನ್ ರಿಂಗ್ ಆಗುತ್ತಿದ್ದರೂ ಕರೆಯನ್ನು ಸ್ವೀಕರಿಸುವುದಕ್ಕೆ ಸಿಬ್ಬಂದಿ ಮುಂದಾಗುತ್ತಿಲ್ಲವೆಂಬ ದೂರು ಕೇಳಿ ಬಂದಿದೆ. ಗ್ರಾಹಕರ ಸಭೆಯನ್ನು ಕಾಟಾಚಾರಕ್ಕೆ ನಡೆಸುತ್ತಿರುವುದರಿಂದ ಸಮಸ್ಯೆಯನ್ನು ತಿಳಿಸಿ ಪರಿಹಾರ ಪಡೆಯಲು ಆಗುತ್ತಿಲ್ಲ. ಬೇಕಾಬಿಟ್ಟಿಯಾಗಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ನೀರು ಸರಬರಾಜಿಗೆ ಅಡ್ಡಿಯಾಗುತ್ತಿದೆ. ಕೊಳವೆಬಾವಿಗಳ ಮೋಟಾರ್ಗಳು ಕೈಕೊಡುತ್ತಿರುವುದರಿಂದ ವಾರ್ಡ್ಗಳಲ್ಲಿ ಹತ್ತು ದಿನಗಳಿಗೆ ಒಮ್ಮೆ ಸಹ ನೀರು ಸಿಗದೆ ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ಖರೀದಿ ಮಾಡುವಂತಾಗಿದೆ ಎಂದು ಜನತೆ ತಮ್ಮ ಗೋಳು ತೋಡಿಕೊಂಡಿದ್ದಾರೆ.