ವಿಜ್ಞಾನ ಮಾದರಿ ಮುಂದೆ ವಿದ್ಯಾರ್ಥಿಗಳ ಮೌನರಾಗ!
ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಸಲುವಾಗಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಸ್ತುಪ್ರದರ್ಶನವು ಶಿಕ್ಷಕರು ಮಾಡಿದ ವಿಜ್ಞಾನ ಮಾದರಿ ವಸ್ತುಗಳಿಗೆ ವಿದ್ಯಾರ್ಥಿಗಳು ಕಾವಲು ನಿಂತಿದ್ದಾರೇನೋ ಎನ್ನುವಂತೆ ಕಂಡು ಬಂತು.
ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಆವರಣದಲ್ಲಿರುವ ಡಾ. ಅಬ್ದುಲ್ ಕಲಾಂ ಸಭಾಂಗಣ, ಉರ್ದುಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ಆಕರ್ಷಕ ವೈಜ್ಞಾನಿಕ ಮಾದರಿ ವಸ್ತುಗಳನ್ನಿಡಲಾಗಿತ್ತು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಿ ಶಿಕ್ಷಕರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆದರೆ, ಪ್ರದರ್ಶನದಲ್ಲಿನ ಮಾದರಿ ವಸ್ತುಗಳ ಮುಂದೆ ಬಹುತೇಕ ವಿದ್ಯಾರ್ಥಿಗಳು ಕೇವಲ ನಿಂತುಕೊಂಡಿದ್ದರು. ಕೆಲವರಿಗೆ ತಾವು ತಂದಿರುವ ಮಾಡೆಲ್ಗಳ ಬಗ್ಗೆ ತಿಳಿದೇ ಇರಲಿಲ್ಲ. ಶಿಕ್ಷಕರು ತಯಾರಿಸಿಕೊಟ್ಟಿದ್ದನ್ನು ತಂದು ತಮ್ಮ ಮುಂದೆಯಿಟ್ಟುಕೊಂಡಿದ್ದರು.
ತೀರ್ಪುಗಾರರು ಕೇಳಿದ ಪ್ರಶ್ನೆಗಳಿಗೆ ವಿವರಣೆ ನೀಡಲು ವಿದ್ಯಾರ್ಥಿಗಳು ವಿಫಲರಾದರು. ತೊದಲುತ್ತ ವಸ್ತುಗಳನ್ನು ತೋರಿಸಿದರೆ ಹೊರತು ವಿವರಣೆ ನೀಡಲಿಲ್ಲ. ಇದರಿಂದ ತೀರ್ಪುಗಾರರೇ ಡ್ರಾಯಿಂಗ್ ಹಾಳೆಯಲ್ಲಿ ಬರೆದಿರುವುದನ್ನು ಓದಿಕೊಂಡು ಹೋಗಬೇಕಾಯಿತು. ಕೆಲವೆಡೆ ಮಾರ್ಗದರ್ಶಿ ಶಿಕ್ಷಕರೇ ವಿವರಣೆ ನೀಡಿ ಬರೆಸಿದರು.
ಪೆಟ್ರೋಲಿಯಂ ಅನಿಲದಿಂದ ಗ್ಯಾಸ್ ಸ್ಟೌವ್ನಲ್ಲಿ ಕಾಫಿ ಮಾಡುವುದು, ದೂರ ಸಂಪರ್ಕ ಜಾಲದ ಕಾರ್ಯ ನಿರ್ವಹಣೆ, ಗಾಳಿಯಿಂದ ವಿದ್ಯುತ್ ತಯಾರಿಕೆ, ಮಳೆ ನೀರಿನ ಸದ್ಬಳಕೆ, ಹನಿ ನೀರಾವರಿ ಪದ್ದತಿ, ವೈಜ್ಞಾನಿಕ ತತ್ವಗಳ ನಿರೂಪಣೆ ಪ್ರಾತ್ಯಕ್ಷಿಕತೆ, ವಿಜ್ಞಾನಿಗಳ ಪರಿಚಯ, ಸೌರವ್ಯೂಹದ ನೋಟ... ಹೀಗೆ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಅನೇಕ ಮಾಡೆಲ್ಗಳು ಎಲ್ಲರ ಗಮನ ಸೆಳೆದವು.
ವೈನಿಕ ಮನೋಭಾವ ಬೆಳೆಸಿಕೊಳ್ಳಿ: ಚಿಕ್ಕಬಳ್ಳಾಪುರ-ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಬೇಕೆಂದು ವಿಧಾನಸಭಾ ಉಪಾಧ್ಯಕ್ಷ ಎನ್.ಹೆಚ್. ಶಿವಶಂಕರ ರೆಡ್ಡಿ ಶಿಕ್ಷಕರಿಗೆ ಸಲಹೆ ನೀಡಿದರು. ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಇನ್ಸ್ಸ್ಪೈರ್ ಅವಾರ್ಡ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಡಾ. ಕೆ.ಸುಧಾಕರ್ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ಕಾರ್ಯಕ್ರಮವಾಗಿದೆ. ಭಾರತ ರತ್ನ ಪಡೆದ ನಮ್ಮ ಜಿಲ್ಲೆಯ ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಸಿ.ಎನ್. ರಾವ್ ತಮ್ಮ ಪ್ರತಿಭೆಯಿಂದ ಕೀರ್ತಿಯನ್ನು ತಂದಿದ್ದು ಇವರ ಹಾದಿಯಲ್ಲಿ ವಿದ್ಯಾರ್ಥಿಗಳು ಸಾಗಬೇಕೆಂದರು. ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷ ಪಿ.ಎ.ಮೋಹನ್ , ನಗರಸಭೆಯ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ಜಬೀನತಾಜ್ , ಶಿಕ್ಷಣ ಇಲಾಖೆಯ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.