ಕೋಟಗಲ್ ಗ್ರಾಮಸ್ಥರ ಪ್ರತಿಭಟನೆ
ಚಿಂತಾಮಣಿ: ಕೋಟಗಲ್ ಗ್ರಾಮದಲ್ಲಿ ಹಲವು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದ್ದರೂ ಗ್ರಾಪಂ ಅಧಿಕಾರಿಗಳು ಬೇಜವಾಬ್ದಾರಿ ತನ ತೋರಿಸುತ್ತಿದ್ದಾರೆಂದು ಆರೋಪಿಸಿ ನೂರಾರು ಗ್ರಾಮಸ್ಥರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಸುಮಾರು 1,000 ಕ್ಕೂ ಹೆಚ್ಚು ಕುಟುಂಬಗಳಿದ್ದು, ಒಂದು ತಿಂಗಳಿಂದ ನೀರಿನ ಸಮಸ್ಯೆ ತಲೆದೋರಿದೆ. ಆದರೆ ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದರಿಂದ ಜನರಿಗೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿದರು. ನಂತರ ಗ್ರಾಪಂ ಪಿಡಿಒ ರಮೇಶ್ ಮತ್ತು ಅಧ್ಯಕ್ಷ ಅಂಜುಮಾನ್ ಜಹೀರಾಬಾನು ಪ್ರತಿಭಟನಕಾರರನ್ನು ಸಮಾಧಾನ ಪಡಿಸಿ ವಾರದೊಳಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ನೀರಿನ ಸಮಸ್ಯೆ ಬಗ್ಗೆ ಶೀಘ್ರವೇ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹಾಗೂ ತಾಪಂ ಇಒ ವಸಂತಕುಮಾರ್ ಗಮನಕ್ಕೆ ತಂದು ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.